ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂದಮ್ಮಗಳು ಜಗತ್ತಿಗೆ ಎಂಟ್ರಿ ಕೊಟ್ಟ ತಕ್ಷಣ ಅನಾರೋಗ್ಯಕ್ಕೆ ತುತ್ತಾಗೋದು, ಸಣ್ಣ ಪುಟ್ಟ ಸಮಸ್ಯೆಗಳು ಮಾಮೂಲಿ. ಇದಕ್ಕೆ ಹೆದರಿ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗುವ ಪೋಷಕರು ಇದ್ದಾರೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಅನಾರೋಗ್ಯದ ಮಗುವಿಗೆ ಪೋಷಕರು 65 ಕಡೆ ಬರೆ ಹಾಕಿದ್ದಾರೆ.
ಕಬ್ಬಿಣದ ಕಡ್ಡಿಯನ್ನು ಕಾಯಿಸಿ ಬರೆ ಹಾಕಿದರೆ ಗುಣವಾಗುವುದೆಂಬ ಮೂಢನಂಬಿಕೆಯಿಂದ ಮಗುವಿಗೆ ಬರೆ ಹಾಕಿದ್ದಾರೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ 22 ದಿನಗಳ ಶಿಶುವಿಗೆ 65 ಕಡೆ ಬರೆ ಹಾಕಲಾಗಿದೆ.
ಈ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಮಗುವಿನ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಅಂತಿಮವಾಗಿ ಗಂಭೀರ ಸ್ಥಿತಿಯಲ್ಲಿ ಅಮರಾವತಿಯ ಡಫರಿನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಲ್ವಂತಿ ರಾಜು ಅಧಿಕಾರ್ ಎಂಬ ಶಿಶು ಅನಾರೋಗ್ಯಕ್ಕೆ ಒಳಗಾಗಿತ್ತು, ಸಂಬಂಧಿಕರು, ಬಂದವರು ಮಗುವಿಗೆ ಬರೆ ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ. ಮಗುವಿನ ಹೊಟ್ಟೆಗೆ 65 ಬಾರಿ ಬರೆ ಹಾಕಿದ್ದಾರೆ. ಮಗುವಿನ ಪೋಷಕರಾದ ರಾಜು ಅಧಿಕಾರ್ ಮತ್ತು ಅವರ ಪತ್ನಿ ಕೂಡ ಈ ಭಯಾನಕ ಘಟನೆಯಲ್ಲಿ ಭಾಗಿಯಾಗಿದ್ದಾರೆ. ಗಾಯಗಳ ತೀವ್ರತೆ ಮತ್ತು ಉಸಿರಾಟದ ತೊಂದರೆಯಿಂದಾಗಿ ಶಿಶುವನ್ನು ಆರಂಭದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಸದ್ಯ ಮಗುವಿನ ಪರಿಸ್ಥಿತಿ ಗಂಭೀರವಾಗಿದೆ.