Paris Olympics | ಪದಕ ಗೆದ್ದ ಮನು-ಸರಬ್ಜೋತ್​ ಜೋಡಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್​ ಮತ್ತು ಸರಬ್ಜೋತ್‌ ಸಿಂಗ್‌ ಜೋಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ , ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ ಸದಸ್ಯೆ ಹಾಗೂ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿಯಾಗಿರುವ ನೀತಾ ಅಂಬಾನಿ ಸೇರಿ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು, ’10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು!. ಮನು ಭಾಕರ್ ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಈ ಸಾಧನೆ ನಮಗೆ ಅಪಾರ ಹೆಮ್ಮೆ ತಂದಿದೆ. ಭವಿಷ್ಯದಲ್ಲಿ ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಇನ್ನೂ ಹಲವು ಪ್ರಶಸ್ತಿಗಳನ್ನು ಗೆಲ್ಲುವಂತಾಗಲಿ’ ಎಂದು ಹಾರೈಸಿದ್ದಾರೆ.

ಪ್ರಧಾನಿ ಮೋದಿ ಕೂಡ ಎಕ್ಸ್ ಪೋಸ್ಟ್ ಮಾಡಿದ್ದು, ‘ಒಲಿಂಪಿಕ್ಸ್​ನಲ್ಲಿ ನಮ್ಮ ಶೂಟರ್‌ಗಳು ಮತ್ತೊಮ್ಮೆ ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ! ಇಬ್ಬರೂ ಶೂಟರ್​ಗಳು ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರುವ ಮೂಲಕ ಪದಕ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ನಿಮ್ಮ ಈ ಸಾಧನೆಯಿಂದ ಕೋಟ್ಯಂತರ ದೇಶವಾಸಿಗಳು ಕೂಡ ಸಂತಸಗೊಂಡಿದ್ದಾರೆ. 2ನೇ ಪದಕ ಗೆದ್ದ ಮನು ಅವರಿಗೆ ವಿಶೇಷ ಅಭಿನಂದನೆಗಳು” ಎಂದು ಮೋದಿ ಬರೆದುಕೊಂಡಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದ ಭಾರತ ಶೀಘ್ರದಲ್ಲೇ ಮತ್ತೊಂದು ಪದಕ ಗೆಲ್ಲಲಿದೆ ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಹಾಗೂ ಐಒಸಿ ಸದಸ್ಯೆ ನೀತಾ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಈವೆಂಟ್ ತಂಡದಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!