ಹೊಸದಿಗಂತ ಡಿಜಿಟಲ್ ಡೆಸ್ಕ್:
CEC ಜ್ಞಾನೇಶ್ ಕುಮಾರ್ ಅವರ ವಿರುದ್ಧದ ವಿಪಕ್ಷಗಳ ಹೋರಾಟ ತೀವ್ರಗೊಂಡಿದ್ದು, ಇದೀಗ ‘ಇಂಡಿಯಾ’ ಒಕ್ಕೂಟದ ಸಂಸದರ ನಿಯೋಗವು ಇಂದು ರಾತ್ರಿ 8ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
ಇದಕ್ಕೂ ಮುನ್ನ ಸಂಜೆ 5 ಗಂಟೆಗೆ ಒಕ್ಕೂಟದ ಎಲ್ಲಾ ಸಂಸದರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಒಟ್ಟುಗೂಡಿ, ರಾಷ್ಟ್ರಪತಿಗಳಿಗೆ ಸಲ್ಲಿಸಬೇಕಾದ ಜಂಟಿ ಮನವಿ ಪತ್ರದ ಸಿದ್ಧತೆಯ ಕುರಿತು ಚರ್ಚೆ ನಡೆಸಲಿದ್ದಾರೆ.
ದೇಶಾದ್ಯಂತ ಹರಡಿದ ಪ್ರತಿಭಟನೆಯ ಕಿಚ್ಚು
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರ ಮೂರನೇ ದಿನವೂ ಪ್ರತಿಭಟನೆಗಳು ತೀವ್ರಗೊಂಡಿವೆ. ಗುರುವಾರವಷ್ಟೇ ವಿಪಕ್ಷಗಳ ನಾಯಕರು ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಸ್ಮಾರಕದ ಮುಂದೆ ಸತ್ಯಾಗ್ರಹ ನಡೆಸಿದ್ದರು. ಈ ಹೋರಾಟ ಕೇವಲ ದೆಹಲಿಗೆ ಸೀಮಿತವಾಗಿರದೆ, ಬಿಹಾರದ ಪಾಟ್ನಾದಲ್ಲಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ಬೃಹತ್ ಧರಣಿ ನಡೆದಿದೆ. ಇತ್ತ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದೆಹಲಿಯ ಪ್ರತಿಭಟನೆಯಲ್ಲಿ ನೇರವಾಗಿ ಕೈಜೋಡಿಸುವುದಾಗಿ ತಿಳಿಸಿದ್ದಾರೆ.
ರಾಹುಲ್, ಪ್ರಿಯಾಂಕಾ ವಿರುದ್ಧ FIR ದಾಖಲು
ಕಳೆದ ಬುಧವಾರ ಜಂತರ್ ಮಂತರ್ ಬಳಿ ನಡೆದ ಭೀಕರ ಜಟಾಪಟಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರ ವಿರುದ್ಧ ಮೂರು ಪ್ರತ್ಯೇಕ FIR ದಾಖಲಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆ ತಂದಿರುವ ಗಂಭೀರ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ಇದೇ ವೇಳೆ, ಪ್ರತಿಭಟನೆಗಳ ತೀವ್ರತೆ ಹೆಚ್ಚುತ್ತಿರುವುದರಿಂದ ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ಒದಗಿಸಲಾಗಿರುವ ‘Z+’ ಭದ್ರತೆಯನ್ನು ಇನ್ನು ಬಲಪಡಿಸಲು CISF ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ.
ಇದನ್ನೂ ಓದಿ:
ದೆಹಲಿಯಲ್ಲಿ ಮದ್ಯ ಮಾರಾಟ ನಿಷೇಧ, ಬಿಗಿ ಬಂದೋಬಸ್ತ್
CJP ಅ.10 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಸರ್ಕಾರವು ಇಂದು ಮತ್ತು ನಾಳೆ ಇಡೀ ನಗರಾದ್ಯಂತ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮತ್ತೊಂದೆಡೆ, ನಾಳೆ ನಡೆಯಲಿರುವ ಧರಣಿಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ದೆಹಲಿ ಜಿಲ್ಲಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಜಾರಿಗೊಳಿಸಿ ಯಾವುದೇ ಕಾನೂನುಬಾಹಿರ ಸಭೆ ಅಥವಾ ಪ್ರತಿಭಟನೆ ನಡೆಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.



