ರನ್‌ ವೇ ಪ್ರವೇಶಿಸುತ್ತಿದ್ದ ವಿಮಾನದ ತುರ್ತು ದ್ವಾರ ತೆರೆದು ರೆಕ್ಕೆಗಳ ಮೇಲೆ ನಡೆದಾಡಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇ ಪ್ರವೇಶಿಸುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.
ಸ್ಯಾನ್ ಡಿಯಾಗೋದಿಂದ ಬರುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ 2478 ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನಲ್ಲಿದ್ದ ಕ್ಯಾಲಿಫೋರ್ನಿಯಾ ಮೂಲದ 57 ವರ್ಷದ ರಾಂಡಿ ಫ್ರಾಂಕ್ ಡೇವಿಲಾ ಎಂಬ ವ್ಯಕ್ತಿ ವಿಮಾನವು ಗೇಟ್‌ ಸಮೀಪಿಸುತ್ತಿದ್ದಾಗ ತುರ್ತುಬಾಗಿಲನ್ನು ತೆರೆದು ರೆಕ್ಕೆಯ ಮೇಲೆಯೇ ವಾಕ್‌ ಮಾಡಿದ್ದಾನೆ. ತಕ್ಷಣವೇ ಎಚ್ಚತ್ತುಕೊಂಡ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ ಎಂದು ಚಿಕಾಗೋ ಪೊಲೀಸ್ ಇಲಾಖೆ (CPD) ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಅಶಿಸ್ತಿನ ವರ್ತನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಮಾನ ಹಾರಾಟ ನಡೆಸುವಾಗಲೇ ಬಾಗಿಲು ತೆರೆಯಲು ಪ್ರಯತ್ನಿಸಿದ ಹಲವಾರು ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಫೆಬ್ರವರಿಯಲ್ಲಿ, ಅಮೇರಿಕನ್ ಏರ್‌ಲೈನ್ಸ್ ವಾಯುಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿಯೇ ಬಾಗಿಲು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ತಡೆಯಲು ಫ್ಲೈಟ್ ಅಟೆಂಡರ್ ಆತನಿಗೆ ಕಾಫಿ ಪಾಟ್‌ನಿಂದ ಹೊಡೆದು ಅಪಾಯ ತಪ್ಪಿಸಿದ್ದ. ಏಪ್ರಿಲ್‌ನಲ್ಲಿ ಮಹಿಳೆಯೊಬ್ಬರು ವಿಮಾನದ ಸಮಯದಲ್ಲಿ ನಿರ್ಗಮಿಸಲು ಪ್ರಯತ್ನಿಸಿ ವಿಫಲವಾದಾಗ ಸಹ ಪ್ರಯಾಣಿಕರನ್ನು ಪದೇ ಪದೇ ಕಚ್ಚಿದ ಪ್ರಕರಣ ನಡೆದಿತ್ತು. ಕಳೆದೊಂದು ವರ್ಷದಲ್ಲಿ ವಿಮಾನಯಾನ ಸಚಿವಾಲಯವು ವಿಮಾನ ಪ್ರಯಾಣ ವೇಳೆ ಅಶಿಸ್ತಿನ ನಡವಳಿಕೆಯ 5,500 ಕ್ಕೂ ಹೆಚ್ಚು ವರದಿಗಳನ್ನು ಸ್ವೀಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!