ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋದ ಪ್ರಯಾಣ ದರ ಹೆಚ್ಚಳ ಮಾಡಿದ್ದು, ಕೇವಲ ಸಾಮಾನ್ಯ ಜನರ ಅಸಮಾಧಾನಕ್ಕೆ ಮಾತ್ರ ಸೀಮಿತವಾಗದೇ ಅನೇಕ ಪ್ರತಿಭಟನೆ ಮತ್ತು ರಾಜಕೀಯ ಟೀಕೆಗೂ ಕಾರಣವಾಯಿತು. ಇದಾದ ಬಳಿಕ ದರ ಪರಿಷ್ಕರಣೆ ನಡೆಸಿದಾದರೂ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿಲ್ಲ. ಇದರ ಪರಿಣಾಮವಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಈ ಮೊದಲು ನಮ್ಮ ಮೆಟ್ರೋದಲ್ಲಿ ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ದರ ಏರಿಕೆ ಬಳಿಕ ಈ ಸಂಖ್ಯೆ ಅಂದಾಜು 6.3 ಲಕ್ಷಕ್ಕೆ ಇಳಿದಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಖ್ಯೆ ಕುಗ್ಗಿದೆ ಎನ್ನಲಾಗಿದೆ.
ಫೆ.8ರಂದು ಬಿಎಂಆರ್ಸಿಎಲ್ ಕೆಲವು ವಿಭಾಗದಲ್ಲಿ ಶೇ 100ರಷ್ಟು ಹಾಗೇ ಪೀಕ್ ಅವರ್ಗಳಲ್ಲಿ ಶೇ 5ರಷ್ಟು ಹೆಚ್ಚುವರಿ ಚಾರ್ಜ್ ವಿಧಿಸಿ ದರ ಹೆಚ್ಚಳ ಮಾಡಿತ್ತು. ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಸಿಎಂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ದರ ಇಳಿಕೆಗೆ ಬಿಎಂಆರ್ಸಿಎಲ್ ಮುಂದಾಯಿತು. ಆದರೂ, ಈ ಎಲ್ಲಾ ಹೊಂದಾಣಿಕೆಗಳು ಪ್ರಯಾಣಿಕರ ಸಂಖ್ಯೆ ಕುಸಿತ ತಡೆಯುವ ಪ್ರಯತ್ನಕ್ಕೆ ಫಲ ನೀಡಿಲ್ಲ.
ಪ್ರಯಾಣಿಕರ ದರ ಕುಸಿತ ಒಪ್ಪಿಕೊಂಡಿರುವ ಹಿರಿಯ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಪ್ರಯಾಣಿಕರಲ್ಲಿ 2.3 ಲಕ್ಷದಷ್ಟು ಕುಸಿತ ಕಂಡಿದ್ದು, ನಿರೀಕ್ಷಿಸಿದ ಆದಾಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಫೆ.9 ದರ ಹೆಚ್ಚಳ ಜಾರಿಗಿಂತ ಮುಂಚಿದ್ದ ಆದಾಯದಷ್ಟೇ ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎನ್ನಬಹುದು ಎಂದಿದ್ದಾರೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಬಿಎಂಆರ್ಸಿಎಲ್ ಅಧಿಕಾರಿ ಯಶವಂತ್ ಚವಾಣ್, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. ಮೆಟ್ರೋ ದರದ ಕುರಿತು ಚರ್ಚೆಗಳು ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.