April 6, 2026
Monday, April 6, 2026
spot_img

ಅಸ್ಸಾಂ ರಾಜಕೀಯದಲ್ಲಿ ‘ಪಾಸ್‌ಪೋರ್ಟ್’ ವಿವಾದ: ಪತ್ನಿ ವಿರುದ್ಧದ ಆರೋಪ ಸುಳ್ಳು ಎಂದ ಹಿಮಂತ ಬಿಸ್ವಾ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ತಲೆದೋರಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳಿಗೆ ಸಿಎಂ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಸುಳ್ಳು ಮತ್ತು ಕೃತಕ ದಾಖಲೆಗಳ ಮೂಲಕ ಗೊಂದಲ ಸೃಷ್ಟಿಸುವ ಯತ್ನ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಗೌರವ್ ಗೊಗೋಯ್ ಪತ್ರಿಕಾಗೋಷ್ಠಿಯಲ್ಲಿ ರಿನಿಕಿ ಭುಯಾನ್ ಶರ್ಮಾ ಯುಎಇ, ಆಂಟಿಗುವಾ-ಬಾರ್ಬುಡಾ ಮತ್ತು ಈಜಿಪ್ಟ್ ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದರು. ಜೊತೆಗೆ ವಿದೇಶಿ ಆಸ್ತಿ ಮತ್ತು ಕಂಪನಿಗಳ ಮಾಹಿತಿ ಬಹಿರಂಗಪಡಿಸಿಲ್ಲ ಎಂಬ ಪ್ರಶ್ನೆಯನ್ನೂ ಎತ್ತಿದ್ದರು. ಈ ಆರೋಪಗಳು ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಇದನ್ನೂ ಓದಿ:

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ಪಕ್ಷವು ನಕಲಿ ದಾಖಲೆಗಳನ್ನು ಆಧಾರವಾಗಿಸಿಕೊಂಡು ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ಪಾಕಿಸ್ತಾನ ಮೂಲದ ಕೆಲವು ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ಚಾನೆಲ್‌ಗಳು ಅಸ್ಸಾಂ ಚುನಾವಣೆಯನ್ನು ಕೇಂದ್ರೀಕರಿಸಿ ಹಲವು ಚರ್ಚಾ ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಅವರು ಆರೋಪಿಸಿದರು. ಇದೇ ಮಾಹಿತಿ ಕಾಂಗ್ರೆಸ್ ಪತ್ರಿಕಾಗೋಷ್ಠಿಗೂ ಬಳಸಲ್ಪಟ್ಟಿದೆ ಎಂದು ಸಿಎಂ ದೂರಿದ್ದಾರೆ.

ಇದರ ಜೊತೆಗೆ, ತಮ್ಮ ಪತ್ನಿಯ ಹೆಸರಿನಲ್ಲಿ ನೋಂದಾಯಿತ ಕಂಪನಿಗಳ ಬಗ್ಗೆ ಮಾತನಾಡಿದ ಸಿಎಂ, “ಯಾರಾದರೂ ಸಣ್ಣ ಶುಲ್ಕ ಪಾವತಿಸಿ ವಿದೇಶದಲ್ಲಿ ಕಂಪನಿ ನೋಂದಾಯಿಸಬಹುದು. ಅದನ್ನು ಆಧಾರ ಮಾಡಿಕೊಂಡು ತಪ್ಪು ಅರ್ಥ ಕಲ್ಪಿಸಲಾಗುತ್ತಿದೆ” ಎಂದು ಸ್ಪಷ್ಟನೆ ನೀಡಿದರು. ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !