ರೋಗಿಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ: ಕೋವಿಶೀಲ್ಡ್ ಲಸಿಕೆ ಕಂಪೆನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಅಸ್ಟ್ರಜೆನೆಕಾ-ಆಕ್ಸ್‌ಫರ್ಡ್‌ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಡ್‌-19 ಕೋವಿಶೀಲ್ಡ್‌ ಲಸಿಕೆಯಿಂದ ಉಂಟಾದ ಅಪರೂಪದ ಅಡ್ಡ ಪರಿಣಾಮಗಳ ಕಳವಳ ವ್ಯಕ್ತವಾಗಿದ್ದು, ಇದರ ನಡುವೆ ರೋಗಿಗಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ಎಂದು ಕಂಪೆನಿ ಹೇಳಿದೆ.

ಭಾರತದಲ್ಲಿ ಅಸ್ಟ್ರಜೆನೆಕಾ ಲಸಿಕೆಯನ್ನು ಆಧಾರ್ ಪೂನಾವಾಲಾ ನೇತೃತ್ವದ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ. ಕೋವಿಶೀಲ್ಡ್ ಹೆಸರಿನಲ್ಲಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಅಥವಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಬಗ್ಗೆ ನಮ್ಮ ಸಹಾನುಭೂತಿ ಇದೆ ಎಂದು ಅಸ್ಟ್ರಜೆನಿಕಾ ವಕ್ತಾರರು ಹೇಳಿದ್ದಾರೆ. ಇದೇ ವೇಳೆ, ರೋಗಿಗಳ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಕೋವಿಡ್ ಲಸಿಕೆ ಸೇರಿದಂತೆ ಎಲ್ಲಾ ಔಷಧಗಳ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ನಿಯಂತ್ರಕ ಅಧಿಕಾರಿಗಳು ಸ್ಪಷ್ಟ ಮತ್ತು ಕಠಿಣ ಮಾನದಂಡಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಅಸ್ಟ್ರಜೆನೆಕಾ ಕಂಪೆನಿಯು ತನ್ನ ಕೋವಿಡ್ ಲಸಿಕೆಯು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್)ನಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟಿಷ್ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿತ್ತು. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನಿಂದಾಗಿ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ ಅಥವಾ ಪ್ಲೇಟ್‌ಲೆಟ್‌ಗಳು ದೇಹದಲ್ಲಿ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿನ ಸ್ಟ್ರೋಕ್ ಆಗುವ ಅಪಾಯವೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ
ಕೋವಿಶೀಲ್ಡ್ ಲಸಿಕೆ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ವಕೀಲ ವಿಶಾಲ್ ತಿವಾರಿ ಎಂಬವರು ಬುಧವಾರ ಅರ್ಜಿ ಸಲ್ಲಿಸಲಾಗಿದೆ. ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಲು ಸೂಚನೆ ನೀಡಬೇಕು. ಲಸಿಕೆ ಹಾಕಿದ ನಂತರ ಯಾರಿಗಾದರೂ ತೊಂದರೆಯಾದರೆ ಅವರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!