ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ ಐಸಿಯುನಲ್ಲಿ ವಿದ್ಯುತ್ ಸ್ಥಗಿತದಿಂದ ಕೆಲ ನಿಮಿಷ ವೆಂಟಿಲೇಟರ್ಗಳು ಬಂದ್ ಆಗಿದ್ದರಿಂದ ಆಮ್ಲಜನಕ ಸಿಗದೆ ರೋಗಿಗಳು ಪರದಾಡಿದ ಘಟನೆ ನಡೆದಿದೆ.
4ನೇ ಮಹಡಿಯಲ್ಲಿನ 429ನೇ ವಾರ್ಡ್ ಐಸಿಯುನ 1 ಮತ್ತು 2ನೇ ಬೆಡ್ಗಳ ವೆಂಟಿಲೇಟರ್ಗಳು ಕೆಲ ನಿಮಿಷದ ಬಳಿಕ ಬ್ಯಾಟರಿ ಸಾಮರ್ಥ್ಯ ಇಲ್ಲದೆ ಸ್ಥಗಿತವಾದವು. ರೋಗಿಗಳು ಪರದಾಡುತ್ತಿದ್ದಂತೆ ನರ್ಸ್ಗಳು ಬೈನ್ ಸರ್ಕ್ಯೂಟ್ ಮೂಲಕ ಆಕ್ಸಿಜನ್ ಕೊಡುವಲ್ಲಿ ನಿರತರಾದರು. ವಿದ್ಯುತ್ ಬರುವವರೆಗೂ ಬೈನ್ ಸರ್ಕ್ಯೂಟ್ ಬಳಕೆ ಮುಂದುವರಿಸಿದರು.
ವೆಂಟಲೇಟರ್ ಸ್ಥಗಿತದಿಂದ ರೋಗಿಗಳ ಸಂಬಂಧಿಕರು ನರ್ಸ್ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆಸ್ಪತ್ರೆಯ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.