ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬುದು ದೃಢವಾಗಿರುವುದು ವರದಿಗಳಿಂದ ತಿಳಿದುಬಂದಿದೆ. ಈ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ (ಸೆ.22) 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಳ್ಳಲಿದ್ದಾರೆ.
ತಿರುಪತಿ ಲಡ್ಡು ವಿವಾದದಬಗ್ಗೆ ಎಕ್ಸ್‌ನಲ್ಲಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿ, ತಿರುಪತಿ ಲಡ್ಡು ಅಂದರೆ ಅಮೃತಕ್ಕೆ ಸಮನಾಗಿ ನೋಡುತ್ತೇವೆ. ತಿರುಮಲ ಲಡ್ಡು ಪ್ರಸಾದ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದು ಜನಾಂಗಕ್ಕೆ ಕಳಂಕ. ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬೆರಸಿರುವುದು ಗೊತ್ತಾದ ಕ್ಷಣವೇ ಬೆಚ್ಚಿಬಿದ್ದೆ. ತಪ್ಪಿತಸ್ಥ ಎಂಬ ಭಾವನೆ, ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲಿ ಇಂತಹ ತೊಂದರೆಗಳು ಗಮನಕ್ಕೆ ಬಾರದಿರುವುದು ನೋವು ತಂದಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ.
ಅದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪವನ್ನು ಕೈಗೊಂಡಿದ್ದೇನೆ. 22 ಸೆಪ್ಟೆಂಬರ್ 2024ರಂದು ಅಂದರೆ ಭಾನುವಾರದ ಬೆಳಗ್ಗೆ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ಕೈಗೊಳ್ಳುತ್ತಿದ್ದೇನೆ. ಅಂದಿನಿಂದ 11 ದಿನಗಳ ಕಾಲವು ದೀಕ್ಷೆಯನ್ನು ಮಾಡುತ್ತೇನೆ. ಬಳಿಕ ತಿರುಮಲಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಇನ್ನೂ ಲಡ್ಡು ತಯಾರಿಯಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿದ ತುಪ್ಪವನ್ನು ಬಳಸಿದರೆಂಬ ವಿಚಾರವು ತಿಳಿದಾಗಿನಿಂದ ಎಲ್ಲರೂ ಕಂಗಾಲಾದರು. ಹಿಂದುಧರ್ಮವನ್ನು ಅದರ ಸಂಸ್ಕೃತಿಯನ್ನು ಉದ್ದರಿಸಬೇಕಾದ ಕಾಲವಿದು. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳಬೇಕಾದ ಕಾಲವಿದು. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳೋಣ ಎಂದಿದ್ದಾರೆ. ಸನಾತನ ಧರ್ಮದ ಮೇಲೆ ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.