ಆಂಧ್ರ ರಾಜಕೀಯದಲ್ಲಿ ಪವನ್ ಕಲ್ಯಾಣ್ ದರ್ಬಾರ್: ಗೆದ್ದು ಬೀಗಿದ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಆಂಧ್ರ ಪ್ರದೇಶ ರಾಜಕೀಯದಲ್ಲಿ ಕಳೆದ 14 ವರ್ಷಗಳಿಂದ ಹೋರಾಟ ನಡೆಸುತ್ತಿರುವನಟ, ರಾಜಕಾರಣಿ ಪವನ್​ ಕಲ್ಯಾಣ್​ ಅವರನ್ನು ಕೊನೆಗೂ ಮತದಾರರು ಕೈ ಹಿಡಿದಿದ್ದು, ಈ ಚುನಾವಣೆಯಲ್ಲಿ ಗಮನಾರ್ಹ ಗೆಲುವು ಲಭಿಸಿದೆ.

ಜನಸೇನಾ ಪಕ್ಷದ ಪವನ್ ಕಲ್ಯಾಣ್​ ಸ್ವತಃ ಭರ್ಜರಿ ಗೆಲುವು ಕಂಡಿರುವ ಜೊತೆಗೆ ತಮ್ಮ ಜನಸೇನಾ ಅಭ್ಯರ್ಥಿಗಳನ್ನು ಸಹ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡಿದ್ದಾರೆ.

ಪೀಠಾಪುರಂ ಕ್ಷೇತ್ರದಿಂದ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎದುರಾಳಿ ವಂಗ ಗೀತಾ ವಿರುದ್ಧ ಭಾರಿ ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಜಕೀಯ ಜೀವನದ ಮೊದಲ ಚುನಾವಣಾ ವಿಜಯ ಸಾಧಿಸಿದ್ದಾರೆ.

ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕಳೆದ ಐದು ವರ್ಷಗಳಿಂದಲೂ ಆಂಧ್ರ ಪ್ರದೇಶದ ಆಡಳಿತ ಪಕ್ಷ ವೈಸಿಪಿ ವಿರುದ್ಧ, ಸಿಎಂ ಜಗನ್ ವಿರುದ್ಧ ಗಟ್ಟಿ ದನಿಯಲ್ಲಿ ವಿರೋಧ ಮಾಡುತ್ತಲೇ ಬಂದಿದ್ದರು. ಹಲವು ಸಮಸ್ಯೆಗಳನ್ನು ಎತ್ತಿ ಹೋರಾಟ, ಪ್ರತಿಭಟನೆಗಳನ್ನು ಮಾಡಿದ್ದರು. ಗೃಹ ಬಂಧನಕ್ಕೂ ಒಳಗಾಗಿದ್ದರು.

ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಪವನ್ ಕಲ್ಯಾಣ್ ಚುನಾವಣೆ ಎದುರಿಸಿದ್ದರು. ಮೈತ್ರಿ ನಿರ್ಣಯದಂತೆ 21 ಸೀಟುಗಳನ್ನು ಪವನ್ ಕಲ್ಯಾಣ್ ಪಡೆದುಕೊಂಡು 21 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ತಮ್ಮನ್ನು ಸೇರಿದಂತೆ ಎಲ್ಲ 21 ಅಭ್ಯರ್ಥಿಗಳನ್ನು ಪವನ್ ಕಲ್ಯಾಣ್ ಗೆಲ್ಲಿಸಿಕೊಳ್ಳುವತ್ತ ದಾಪುಗಾಲು ಹಾಕಿದ್ದಾರೆ. ಸ್ವತಃ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದ ಗೆಲುವು ಸಹ ಪಡೆದುಕೊಂಡಿದ್ದಾರೆ.

21 ಕ್ಷೇತ್ರಗಳಲ್ಲಿಯೂ ಜನಸೇನಾ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಪವನ್ ಸೇರಿದಂತೆ ಆರು ಮಂದಿ ಅಭ್ಯರ್ಥಿಗಳ ಗೆಲುವು ಈಗಾಗಲೇ ಘೋಷಣೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!