ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಪಾಕಿಸ್ತಾನ ದೂರುಗಳನ್ನು ಹೊತ್ತು ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಮೊರೆ ಹೋಗಿದೆ.
ಫೆಬ್ರವರಿ 20 ರಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯದ ನೇರ ಪ್ರಸಾರದ ವೇಳೆ ಟಿವಿ ಮತ್ತು ಆ್ಯಪ್ನಲ್ಲಿ ಪಾಕಿಸ್ತಾನದ ಹೆಸರು ಇಲ್ಲದಿರೋದಕ್ಕೆ ಕಿಡಿಕಾರಿದೆ. ಉಳಿದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನೇರ ಪ್ರಸಾರದ ವೇಳೆ ‘ಚಾಂಪಿಯನ್ಸ್ ಟ್ರೋಫಿ-2025 ಪಾಕಿಸ್ತಾನ’ ಎಂದು ಬರೆಯಲಾಗಿತ್ತು. ಆದರೆ ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ‘ಚಾಂಪಿಯನ್ಸ್ ಟ್ರೋಫಿ-2025’ ಎಂದಷ್ಟೇ ಬರೆಯಲಾಗಿತ್ತು.ಇದರಿಂದ ಕೋಪಿಸಿಕೊಂಡಿರುವ ಪಿಸಿಬಿ, ಅದರ ಬಗ್ಗೆ ವಿವರಣೆ ಕೇಳಿದೆ. ಅಲ್ಲದೇ ಐಸಿಸಿಗೆ ದೂರು ನೀಡಿರುವ ಪಾಕ್, ಮುಂದಿನ ಪಂದ್ಯಗಳಲ್ಲಿ ಕಡ್ಡಾಯವಾಗಿ ಪಾಕಿಸ್ತಾನದ ಹೆಸರು ಇರುವಂತೆ ಆಶ್ವಾಸನೆ ಪಡೆದುಕೊಂಡಿದೆ ಎನ್ನಲಾಗಿದೆ.
ವಿವಾದಗಳು ಇದೇ ಮೊದಲಲ್ಲ
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದ ಉಂಟಾಗಿರುವುದು ಇದೇ ಮೊದಲಲ್ಲ. ಟೂರ್ನಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿರುವುದನ್ನೇ ಗಾಳವನ್ನಾಗಿ ಮಾಡಿಕೊಂಡಿದ್ದ ಪಿಸಿಬಿ, ಐಸಿಸಿ ಬಳಿ ತಾನು ಕೂಡ ಕೆಲವು ಷರತ್ತುಗಳನ್ನು ಮುಂದಿರಿಸಿತ್ತು.ಐಸಿಸಿ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿತ್ತು.
ಆ ಬಳಿಕ ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಮುದ್ರಿಸುತ್ತಿಲ್ಲ ಎಂಬುದನ್ನೇ ಪಾಕ್ ಮೀಡಿಯಾಗಳು ದೊಡ್ಡ ವಿವಾದವನ್ನಾಗಿಸಿದ್ದವು. ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿದ್ದ ಬಿಸಿಸಿಐ, ನಾವು ಐಸಿಸಿ ನಿಯಮಗಳಿಗೆ ಬದ್ಧರಾಗಿದ್ದೇವೆ ಎಂದಿತ್ತು. ಇದೀಗ ಲೋಗೋದಲ್ಲಿ ಹೆಸರಿಲ್ಲದ್ದಿರುವುದಕ್ಕೆ ಐಸಿಸಿ ಸ್ಪಷ್ಟನೆ ನೀಡಿದರೂ ಪಿಸಿಬಿಗೆ ಮಾತ್ರ ಸಮಾಧಾನವಾದಂತೆ ಕಾಣುತ್ತಿಲ್ಲ.