ಹೊಸದಿಗಂತ ವರದಿ ಪುತ್ತೂರು:
ರಾಜ್ಯದಲ್ಲಿ ಸಿದ್ಧರಾಮಣ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ವರ್ಗಾವಣೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದೇ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.
ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎಲ್ಲಾ ತ್ಯಾಗ ಮಾಡಿರುವಂತಹ ಮುನಿಗಳ ಹತ್ಯೆ ನಡೆಯುತ್ತದೆ, ಬೆಂಗಳೂರಿನಂತಹ ಮಹಾನಗರದಲ್ಲಿ ಉದ್ಯಮಿಗಳ ಹತ್ಯೆ ನಡೆಯುತ್ತದೆ, ರಾಷ್ಟ್ರ ಹಿತದ ಕಾರ್ಯ ಮಾಡುವ ಕಾಯ್ಕರ್ತರ ಹತ್ಯೆ ಆಗುತ್ತದೆ, ಮಂಗಳೂರಿನಂತಹ ನಗರದಲ್ಲಿ ಜೀವನೋಪಾಯಕ್ಕಾಗಿ ಬರುವ ಕಾರ್ಮಿಕರ ಹತ್ಯೆ ನಡೆಯುತ್ತದೆ. ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ ಹತ್ತಾರು ಹತ್ಯೆಗಳು ನಡೆದಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾದಂತಹ ಪರಿಸ್ಥಿತಿ ಜನಸಾಮಾನ್ಯರಿಗೆ ಎದುರಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳ ವರ್ಗಾವಣೆಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆದಿರುವ ಹಿನ್ನಲೆಯಲ್ಲಿ ಸರಕಾರದ ಮಾತುಗಳನ್ನು ಪೊಲೀಸ್ ಇಲಾಖೆ ಕೇಳದಂತಾಗಿದೆ. ವರ್ಗಾವಣೆಯಲ್ಲಿ ದರ ನಿಗದಿಯಾಗಿದೆ. ದರ ನಿಗದಿಯಾಗಿರುವಂತೆ ವರ್ಗಾವಣೆಗಳು ನಡೆಯುತ್ತಿದ್ದು, ಇದರ ಹಿಂದೆ ಹತ್ತಾರು ಕಾಣದ ಕೈಗಳು ಕೆಲಸ ಮಾಡುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳ ಮಧ್ಯೆ ಗೊಂದಲಗಳು ಆರಂಭವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಕಾರಣವಾಗಿದೆ. ಅಲ್ಲದೆ, ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ, ಜೈಲಿನೊಳಗೆ ಡಬ್ಬಲ್ ಮರ್ಡರ್, ಸುಳ್ಯದ ವಿದ್ಯಾರ್ಥಿನಿ ನಡುರಸ್ತೆಯಲ್ಲೇ ಹತ್ಯೆ ಆಗಿರುವಂತಹ ಪ್ರಕರಣಗಳು ನಡೆದಿತ್ತು ಎಂದು ಅವರು ವಿವರಿಸಿದರು.
ನಾನು ಮೊನ್ನೆ ಚಿಕ್ಕೋಡಿಗೆ ತೆರಳಿ ಮುನಿಗಳ ಹತ್ಯೆ ನಡೆದಿರುವ ಕುರಿತು ಪರಿಶೀಲನೆ ನಡೆಸಿದ್ದೇನೆ. ಈ ಸಂದರ್ಭ ವಿಚಿತ್ರ ವಿಚಾರಗಳು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಈ ವಿಚಾರವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಎಲ್ಲಾ ಕೊಲೆ ಪ್ರಕರಣಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಮತ್ತೆ ರೈತರ ಆತ್ಮಹತ್ಯೆ
ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಆರಂಭಗೊಂಡಿದೆ. ಈ ಹಿಂದೆ ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಅತೀ ಹೆಚ್ಚು ಆತ್ಮಹತ್ಯೆಗಳಾಗಿದ್ದವು. ಸುಮಾರು 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರಿಗೆ ಸವಲತ್ತುಗಳನ್ನು ವಿತರಿಸುವಲ್ಲಿ ಸರಕಾರ ನಿರಾಸಕ್ತಿಯನ್ನು ತಳೆದಿದೆ. ಕೇಂದ್ರ ಸರಕಾರ ನಿಡುತ್ತಿದ್ದ ಕಿಸಾನ್ ಸಮ್ಮಾನ್ ಜೊತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ನೀಡುತ್ತಿದ್ದ ರೂ.4 ಸಾವಿರ ಮೊತ್ತವನ್ನು ಇದೀಗ ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಮೋಸ ಮಾಡುವ ಸರಕಾರ ಇಂದು ಆಡಳಿತ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರೈತರ ಪರ ಯೋಜನೆ ಹಾಕಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದ್ವೇಷದ ರಾಜಕಾರಣ
ರಾಜ್ಯದಲ್ಲಿ ಬಸವರಾಜ ಬೊಮ್ಮಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಾವಿರಾರು ಕೋಟಿ ಮೊತ್ತವನ್ನು ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಗೊಳಿಸಿದ್ದರು. ಇಂದಿನ ಕಾಂಗ್ರೆಸ್ ಸರಕಾರ ಇದಕ್ಕೆಲ್ಲಾ ತಡೆಯೊಡ್ಡಿದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವಂತಾಗಿದೆ. ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದು, ಪಠ್ಯ ಪುಸ್ತಕಗಳಲ್ಲಿ ಪಾಠಗಳ ಬದಲಾವಣೆ ಇಂತಹ ಕಾರ್ಯಗಳ ಮೂಲಕ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಸರಿಯಲ್ಲ ಎಂದು ಅವರು ಹೇಳಿದರು.