ಹೊಸದಿಗಂತ ವರದಿ, ಹುಬ್ಬಳ್ಳಿ:
ಮಣಿಪುರ ಹಾಗೂ ಹರಿಯಾಣದಲ್ಲಿ ಗಲಭೆ, ದೌರ್ಜನ್ಯ ನಡೆಯುತ್ತಿದ್ದರು ಸಹ ಅಲ್ಲಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ನಗರದಲ್ಲಿ ಸರ್ವಧರ್ಮ ಸಮುದಾಯದವರಿಂದ ಆ. 7 ರಂದು ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಫಾಸ್ಟರ್ ಸುನೀಲ ಮಹಾಡೆ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಜ್ಯದ ಜನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಮಾತನಾಡುತ್ತಿಲ್ಲ. ಜನರ ರಕ್ಷಿಸಬೇಕಾದ ಸರ್ಕಾರವೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.
ಮಾಜಿ ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲಾ ಮಾತನಾಡಿ, ಅಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿಯ ಸ್ಟೇಷನ್ ರಸ್ತೆ ಬಿ.ಆರ್. ಅಂಬೇಡ್ಕರ್ ಮೂರ್ತಿಯಿಂದ ಪ್ರತಿಭಟನೆ ಆರಂಭವಾಗಿ ಸ್ಟೇಶನ್ ರಸ್ತೆ, ಸಿಬಿಟಿ, ದುರ್ಗದಬೈಲ್, ಕೊಪ್ಪಿಕರ ರಸ್ತೆ, ಮಹಾನಗರ ಪಾಲಿಕೆ ಮೂಲಕ ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ಸರ್ವಧರ್ಮದ ಸುಮಾರು 10 ಸಾವಿರ ಜನ ಅಂದು ಸೇರಲಿದ್ದಾರೆ ಎಂದು ತಿಳಿಸಿದರು.
ಮಣಿಪುರದ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರು ಸರ್ಕಾರ ಮೌನವಾಗಿದೆ. ಇದು ಸರಿಯಾದ ನಡೆಯಲ್ಲ. ಸರ್ಕಾರ ಇದರಲ್ಲಿಯೂ ರಾಜಕಾರಣ ಮಾಡುತ್ತಿದೆ. ಆದ್ದರಿಂದ ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಮಣಿಪುರದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹರಿಯಾಣದಲ್ಲಿ ಸಹ ಇಂತದ್ದೇ ನಡೆಯುತ್ತಿದೆ. ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸವಾಗುತ್ತಿದೆ. ಆದ್ದರಿಂದ ಮಣಿಪುರ, ಹರಿಯಾಣ ಜನರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾದ್ರಿ ಪ್ರಶಾಂತ ಪಿಟರ್, ಎಡ್ವರ್ಡ್ ಜಿ., ಫಾದರ್ ನಿಕೋಲಸ್ ಮತ್ತು ಬ್ರೇಯಾನ್ ಡಿಸೋಜಾ ಇದ್ದರು.