ನವಿಲು ಮಾರಾಟ ಯತ್ನ: ಇಬ್ಬರ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಜೀವಂತ ನವಿಲನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.
ಆರೋಪಿ ಬಳಿಯಿಂದ ಒಂದು ಜೀವಂತ ನವಿಲನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿ-ಸುಂಟಿಕೊಪ್ಪ ಮಾರ್ಗದಲ್ಲಿರುವ ರೆಸಾರ್ಟ್ ಒಂದರ ಬಳಿ ಇಬ್ಬರು ವ್ಯಕ್ತಿಗಳು ನವಿಲನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಅರಿತು ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳ ಸಹಿತ ನವಿಲು ಮತ್ತು ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಜೆ.ಎಂ. ಕಾರ್ತಿಕ್ ಮತ್ತು ಎಸ್.ಹೆಚ್. ಹರೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‍ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ ಹೆಡ್‍ಕಾನ್ಸ್ಟೇಬಲ್‍ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ ಹಾಗೂ ಕಾನ್ಸ್‌ಟೇಬಲ್ ಸ್ವಾಮಿ, ಮಂಜುನಾಥ ಅವರುಗಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!