ಹೊಸದಿಂಗತ ಡಿಜಿಟಲ್ ಡೆಸ್ಕ್:
ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ತೆರಳಲಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉಡುಪಿ ಅಷ್ಟ ಮಠಗಳಿಗೆ ಮೂಲ ಮಠವಾದ ಕಾಸರಗೋಡಿನ ಮಂಜೇಶ್ವರ ಕಣ್ವತೀರ್ಥ ಮಠಕ್ಕೆ ಅಯೋಧ್ಯೆಗೆ ತೆರಳುವ ಮುನ್ನ ಪೇಜಾವರ ಶ್ರೀಗಳು ಮಂಗಳವಾರ ಭೇಟಿ ನೀಡಿದರು.
ಕಣ್ವತೀರ್ಥದ ಶ್ರೀರಾಮಾಂಜನೇಯ ದೇವಸ್ಥಾನದ ತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಶ್ರೀರಾಮಾಂಜನೇಯ ದೇವರಿಗೆ ಆರತಿ ಬೆಳಗಿದರು. ಬಳಿಕ ಮೆರವಣಿಗೆಯಲ್ಲಿ ಕಡಲ ತೀರಕ್ಕೆ ತೆರಳಿ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ರಾಜನಿಗೆ ಹಾಲೆರೆದು, ಹೂವು ಅರ್ಪಿಸಿ ಅಭಿಷೇಕ ನೆರವೇರಿಸಿ ಆರತಿ ಬೆಳಗಿದರು. ಅಲ್ಲದೆ ಸಮುದ್ರ ಸ್ನಾನ ಜತೆಗೆ ಸಮುದ್ರದಲ್ಲಿ ಈಜಿ ಸಂಭ್ರಮಿಸಿದರು.
ಬಳಿಕ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ಆಗಮಿಸಿ ನವೀಕೃತ ಹೊರ ಸುತ್ತು ಪೌಳಿಯನ್ನು ಲೋಕಾರ್ಪಣೆಗೊಳಿಸಿದರು. ಪೇಜಾವರಶ್ರೀಗಳ 60 ನೇ ವರ್ಷದ ನೆನಪಿಗಾಗಿ ಈ ಸುತ್ತು ಪೌಳಿ ನವೀಕರಣಗೊಳಿಸಲಾಗಿದೆ. ಈ ವೇಳೆ ನಡೆದ ಸರಳ ಸಮಾರಂಭದಲ್ಲಿ ಸುತ್ತು ಪೌಳಿ ನವೀಕರಣದ ಉಸ್ತುವಾರಿ ವಹಿಸಿದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಪೇಜಾವರಶ್ರೀ ಗೌರವಿಸಿದರು.