ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಅವರು ಸತತ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ಖಂಡು ಅವರನ್ನು ಬಿಜೆಪಿ (BJP) ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಅರುಣಾಚಲ ಪ್ರದೇಶದ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಬಿಜೆಪಿಯ ಹಿರಿಯ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ತರುಣ್ ಚುಗ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಲಾಗಿತ್ತು. ಖಂಡು ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಬಿಜೆಪಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ 46 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ರಾಜ್ಯದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ 5, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ 3, ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ 2, ಕಾಂಗ್ರೆಸ್ 1 ಮತ್ತು ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.ಬಿಜೆಪಿಗೆ ಎನ್‌ಪಿಪಿ ಬೆಂಬಲವನ್ನು ನೀಡಿದೆ.