May 19, 2026
Tuesday, May 19, 2026
spot_img

ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು: ಸಿಎಂ ಸಿದ್ದರಾಮಯ್ಯ ಭರವಸೆ

ಹೊಸದಿಗಂತ ವರದಿ ತುಮಕೂರು:

ಚುನಾವಣೆ ವೇಳೆ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ತುಮಕೂರಿನಲ್ಲಿ ಸಾಧನಾ ಸಮರ್ಪಣಾ ಸಮಾವೇಶ

ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಬಳಿಕ, “ನವ ಕರ್ನಾಟಕ” ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ನಾಳೆಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಜಿ.ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ ಮತ್ತು ಕಂದಾಯ ಇಲಾಖೆಯ ಕ್ರಾಂತಿಕಾರಿ ಜನೋಪಯೋಗಿ ಕೆಲಸಗಳ ಜನಾರ್ಪಣೆ ಸಮಾವೇಶವನ್ನು ಸ್ವಯಂಸ್ಫೂರ್ತಿಯಿಂದ ತುಮಕೂರಿನಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಜಿ.ಪರಮೇಶ್ವರ್ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಪ್ರಮುಖವಾಗಿ ನಾವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಒಂದೊಂದಾಗಿ ಈಡೇರಿಸಿದ್ದಲ್ಲದೆ ಉಳಿದ ಭರವಸೆಗಳನ್ನೂ ಈಡೇರಿಸಿ ನಾವು ನಿಮ್ಮ ಮುಂದೆ ಧನ್ಯತೆ ಅರ್ಪಿಸಲು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇವೆ ಎಂದರು.

ಕೆಟ್ಟ ರಾಜಕಾರಣ ನಾವು ಮಾಡಲಿಲ್ಲ

ನಾವು ಅಧಿಕಾರಕ್ಕೆ ಬಂದ ಬಳಿಕ‌ ಸರ್ವ ಜಾತಿ, ಸರ್ವ ಧರ್ಮದ ಸಕಲ ಜನತೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರ ರೀತಿ ಜಾತಿ ಧರ್ಮದದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವ ಕೆಟ್ಟ ರಾಜಕಾರಣ ನಾವು ಮಾಡಲಿಲ್ಲ. ಬಿಜೆಪಿಯವರ ಎಲ್ಲಾ ಅಪಪ್ರಚಾರಗಳನ್ನು ಸುಳ್ಳಾಗಿಸಿ ನಾವು ಅಭಿವೃದ್ಧಿ ಮಾಡಿ ತೋರಿಸಿದ್ದೇವೆ.

ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು

35 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ಅಭಿವೃದ್ಧಿಯೇ ಆಗಿಲ್ಲ. ಮೊನ್ನೆಯಷ್ಟೆ ಕೇವಲ 2500 ರೂ ಮನೆ ಬಾಡಿಗೆ ಕಟ್ಟಲಾಗದ ಕಾರಣಕ್ಕೆ ಬಾಡಿಗೆಗಿದ್ದ ಬಡ ಕುಟುಂಬದ 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇದು ನಿಜವಾದ ಗುಜರಾತ್ ಮಾದರಿ. ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದರು.

ಮೋದಿಯವರು ಪ್ರಧಾನಿ ಆಗುವ ಮೊದಲು ದೇಶದಲ್ಲಿ ಡೀಸೆಲ್, ಪೆಟ್ರೋಲ್, ಚಿನ್ನದ ಬೆಲೆ ಎಷ್ಟಿತ್ತು. ಈಗ ಅದು ಆಕಾಶಕ್ಕೆ ಏರಿದೆ. ಟ್ರಂಪ್ ಬಾಲ ಹಿಡಿದು ಸುತ್ತುತ್ತಿದ್ದ ಮೋದಿಯವರೇ ಈ ಬೆಲೆ ಏರಿಕೆಗೆ ಕಾರಣ. ಮೋದಿ ದರ್ಬಾರಿನಲ್ಲಿ ಅಂಬಾನಿ ಮತ್ತು ಅದಾನಿ ಮಾತ್ರ ಲಾಭ ಮಾಡಿಕೊಂಡು ಈಗ ಇವರ ಆಸ್ತಿ 8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಆದಾಯ ಮತ್ತು ಬದುಕು ನೆಲಕಚ್ಚಿದ್ದನ್ನು ವಿವರಿಸಿದರು.

ಇದನ್ನೂ ಓದಿ:

ಮೋದಿ ಮೋದಿ ಎಂದು ಕುಣಿಯುತ್ತಿದ್ದ ಭಾರತದ ಬಡ ಜನರು ಮತ್ತು ಮಧ್ಯಮ ವರ್ಗದವರಿಗೆ ಭ್ರಮನಿರಸನವಾಗಿದೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ತಲಾ ಆದಾಯದಲ್ಲಿ ಕನ್ನಡಿಗರು ಇಡೀ ದೇಶದಲ್ಲೇ ನಂಬರ್ ಒನ್ ಇದ್ದಾರೆ. ಇಡೀ ದೇಶದ GST ಗೆ ನಮ್ಮ ಕೊಡುಗೆ ಅಪಾರ ಇದೆ. ದೇಶದ ತಲಾ ಆದಾಯಕ್ಕಿಂತ ರಾಜ್ಯದ ಆದಾಯ ಹೆಚ್ಚಾಗಿರುವ ರೀತಿಯಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ನಾವು ನುಡಿದಂತೆ ನಡೆದು ಸಾಬೀತುಪಡಿಸಿರುವುದರಿಂದ ಮತ್ತೆ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. ಕುವೆಂಪು ಅವರ “ಸರ್ವ ಜನಾಂಗದ ಶಾಂತಿಯ ತೋಟ” ಎನ್ನುವ ಆಶಯದ ನಾಡನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸುತ್ತೇವೆ. ಸಂವಿಧಾನಬದ್ದ ಅಭಿವೃದ್ಧಿ ಮಾರ್ಗದಲ್ಲಿ ನಾಡನ್ನು ಮುನ್ನಡೆಸುತ್ತೇವೆ ಎಂದು ಭರವಸೆ ನೀಡಿದರು.

ನೀಟ್ ಪರೀಕ್ಷೆ ರದ್ದಿಗೆ ಮೋದಿ ಸರ್ಕಾರ ಕಾರಣ

ನೀಟ್ ಪರೀಕ್ಷೆ ರದ್ದಾಗಿ 22 ಲಕ್ಷ ವಿದ್ಯಾರ್ಥಿಗಳ‌ ಭವಿಷ್ಯದ ಜೊತೆ ಚೆಲ್ಲಾಟ ಆಡಿ, ಹಲವು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮೋದಿ ಸರ್ಕಾರ ಕಾರಣ. ರಾಜ್ಯದ CET ಮಾದರಿಯಲ್ಲಿ ಪರೀಕ್ಷೆ ನಡೆಸಿ ಎಮ್ನುವ ನಮ್ಮ ಸಲಹೆಯನ್ನು ತಿರಸ್ಕರಿಸಿ ನೀಟ್ ನಲ್ಲಿ ಅದ್ವಾನ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಮೋದಿಯ ಅಚ್ಚೇ ದಿನ ಬರಲಿಲ್ಲ. ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ‌ ಆತ್ಮಹತ್ಯೆ ತಡೆಯದ ಮೋದಿ ಸರ್ಕಾರ, ರೈತರ ಆದಾಯವನ್ನೂ ದುಪ್ಪಟ್ಟು ಮಾಡಲಿಲ್ಲ. ಕಪ್ಪು ಹಣ ತರಲಿಲ್ಲ. ಹೀಗಾಗಿ ಬಿಜೆಪಿ-ಆರ್ ಎಸ್ ಎಸ್ ಸರ್ಕಾರ ಸಂಪೂರ್ಣ ವಿಫಲವಾಗಿ ದೇಶದ ಸಾಲವನ್ನು 220 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ನೆಮ್ಮದಿನ ನಾಡು ಕಟ್ಟುವ ಸರ್ಕಾರ ಕೊಟ್ಟಿದ್ದೇವೆ. ಮೋದಿ ದೇಶದ ನೆಮ್ಮದಿ ಕಸಿಯುವ ಸರ್ಕಾರ ಕೊಟ್ಟಿದ್ದಾರೆ ಎಂದರು.

ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ, ಕಂದಾಯ ಸಚಿವ ಕೃಷ್ಣಬೈರೇಗೌಡರ ಅವರ ಉಸ್ತುವಾರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಎಲ್ಲಾ ಸಚಿವರು ಹಾಗೂ ಶಾಸಕರುಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !