ಹೊಸದಿಗಂತ ವರದಿ ಮಡಿಕೇರಿ:
ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದೇ ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.
ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಂದೇ. ಎಲ್ಲಾ ಸಮಸ್ಯೆಗಳಿಗೂ ಪಕ್ಷದ ನಾಯಕತ್ವವೇ ಸೂಕ್ತ ಪರಿಹಾರ ಕಂಡುಕೊಳ್ಳಲಿದೆ. ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಸಹಜ ಪ್ರಕ್ರಿಯೆ. ಒಂದು ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯಗಳು ಬರುವಂತೆ, ಪಕ್ಷದಲ್ಲಿಯೂ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಹಜ. ಆದರೆ ಅವುಗಳನ್ನು ಅನಗತ್ಯವಾಗಿ ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:
ಪಕ್ಷದ ವೇದಿಕೆಯಲ್ಲಿಯೇ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ಈ ವಿಚಾರಗಳನ್ನು ಶೀಘ್ರದಲ್ಲೇ ಬಗೆಹರಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಹೊರಟ್ಟಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ವಿಧಾನ ಪರಿಷತ್ತಿನ, ಸದಸ್ಯರ ಸಂಖ್ಯಾಬಲ ಹಾಗೂ ಪಕ್ಷದ ತೀರ್ಮಾನದ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.



