ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ದರ ಏರಿಕೆಯಿಂದ ಬೇಸತ್ತಿರುವ ಸಿಲಿಕಾನ್ ಸಿಟಿ ಮಂದಿ, ಮೆಟ್ರೋ ಪ್ರಯಾಣದಿಂದ ದಿನೇ ದಿನೇ ದೂರ ಸರಿಯುತ್ತಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ 8 ಲಕ್ಷದಿಂದ 7.46 ಲಕ್ಷಕ್ಕೆ ಕುಸಿತ ಕಂಡಿದೆ. ಒಂದೇ ತಿಂಗಳಲ್ಲಿ ಬರೋಬ್ಬರಿ 40 ಲಕ್ಷ ಜನ ಮೆಟ್ರೋ ಪ್ರಯಾಣ ಬಿಟ್ಟು ಸಾರಿಗೆ ಹಾಗೂ ಸ್ವಂತ ಗಾಡಿಗಳ ಕಡೆ ಮುಖ ಮಾಡಿದ್ದಾರೆ.
ದರ ಏರಿಕೆಗೆ ಪ್ರಯಾಣಿಕರಿಂದ ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಎಚ್ಚೆತ್ತುಕೊಂಡಿದ್ದ ಬಿ ಎಂ ಆರ್ ಸಿಎಲ್, ಎಲ್ಲಿ ಟಿಕೆಟ್ ದರ ದುಪ್ಪಟ್ಟು ಇರುತ್ತದೆಯೋ ಅಲ್ಲೆಲ್ಲ ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ದರ ಕಡಿಮೆ ಮಾಡಲಿಲ್ಲ.
ಟಿಕೆಟ್ ದರ ಏರಿಕೆಯಿಂದ ಮೆಟ್ರೋಗೆ ಹೆಚ್ಚಿನ ಲಾಭವಾಗುತ್ತಿಲ್ಲ. ಜನರ ಸಂಖ್ಯೆ ಕಡಿಮೆಯಾದರೂ ನಷ್ಟವನ್ನೂ ಅನುಭವಿಸುತ್ತಿಲ್ಲ. ಆದರೆ, ದರ ಏರಿಕೆ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಬಿಎಂಆರ್‌ಸಿಎಲ್ ದರ ಕಡಿಮೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.