ಹೊಸದಿಗಂತ ವರದಿ ವಿಜಯಪುರ:
ರಾಜ್ಯದ ಜನರು ಸ್ಪಷ್ಟವಾಗಿ 136 ಸ್ಥಾನ ಗೆಲ್ಲಿಸುವ ಮೂಲಕ ನಮಗೆ ಅಧಿಕಾರ ನೀಡಿದ್ದು, ಯಾರೋ ಹೇಳಿಕೆ ನೀಡಿದರೆ ಸರ್ಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ. ಶಾಸಕ ಯತ್ನಾಳರದ್ದು ಬಾಲಿಷ ಹೇಳಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ಅರಳು ಮರಳು ಆಗಿದೆ ಎಂದು ಕಿಡಿಕಾರಿದರು.
ಅಲ್ಲದೆ, ಮಹಾನಗರ ಪಾಲಿಕೆ ಆಯುಕ್ತರು ಲೋವರ್ ಕೆಡರ್ ಎಂದು ಹೇಳಿದ್ದಾರೆ. ಇದೇ ಶಾಸಕ ಯತ್ನಾಳ್, ಹಿಂದಿನ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನು ಮುಂದುವರಿಸಬೇಕೆಂದು ಲೆಟರ್ ಕೊಟ್ಟಿದ್ದರು. ಹೀಗಾಗಿ ಅವರಿಗೆ ಅರಳು ಮರಳು ಇರಬೇಕು ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ 10 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಈ ಹಿಂದೆಯೇ ಮಾತನಾಡಿದ್ದರು. ಅವರದ್ದೇ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿ ಆ ವಿಡಿಯೋ ಇದೆ. ಇದೆಲ್ಲ ಬಹಿರಂಗ ವಿಚಾರ. ಹೀಗಾಗಿ ಕಾಂಗ್ರೆಸ್ ಮೇಲಿನ ಅವರ ಆರೋಪದಲ್ಲಿ ಹುರಳಿಲ್ಲ ಎಂದರು.
ಇನ್ನು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಿವಾರಣೆ ಕುರಿತಾಗಿ ಮಾತನಾಡಿದ ಅವರು ಬಸವನಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ ಹಾಗೂ ತಾವು ಗ್ರಾಮಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.