ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಶುರುವಾಗುತ್ತಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರು ಸರಬರಾಜು ಸಮಸ್ಯೆಗಳು ಎದುರಾಗುತ್ತಿದೆ.
ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕುಡಿಯುವ ನೀರನ್ನು ವ್ಯರ್ಥ ಮಾಡುವುದರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇನ್ಮುಂದೆ ಕಾರು ತೊಳೆಯುವುದು, ತೋಟಗಾರಿಕೆ, ರಸ್ತೆಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಕುಡಿಯದ ಉದ್ದೇಶಗಳಿಗಾಗಿ ಕಾವೇರಿ ನೀರನ್ನು ಬಳಸಿದರೆ ರೂ. 5,000 ದಂಡ ವಿಧಿಸುವುದಾ ಆದೇಶ ಹೊರಡಿಸಿದೆ.
ಉಲ್ಲಂಘನೆಯನ್ನು ಪುನರಾವರ್ತಿಸಿದರೆ ದಿನಕ್ಕೆ ಹೆಚ್ಚುವರಿ ರೂ. 500 ಮತ್ತು ಹೊಸದಾಗಿ ನಿಗದಿಪಡಿಸಲಾದ ರೂ 5,000 ವಿಧಿಸಲಾಗುತ್ತದೆ.
ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನಿಷೇಧಿತ ಆದೇಶಗಳನ್ನು ಹೊರಡಿಸಿದ್ದಾರೆ. ಅದರಲ್ಲಿ ವಾಹನಗಳನ್ನು ತೊಳೆಯುವುದು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿಗಳು, ರಸ್ತೆ ನಿರ್ಮಾಣ ಅಥವಾ ಶುಚಿಗೊಳಿಸುವಿಕೆ ಮತ್ತು ರಂಗಮಂದಿರಗಳು ಮತ್ತು ಸಿನೆಮಾ ಹಾಲ್‌ಗಳಲ್ಲಿ ಕುಡಿಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಕುಡಿಯುವ ನೀರನ್ನು ಬಳಸುವುದನ್ನು BWSSB ನಿಷೇಧಿಸಿದೆ. ಇದು BWSSB ಕಾಯ್ದೆ 1964, ಸೆಕ್ಷನ್ 33 ಮತ್ತು 34ಕ್ಕೆ ಅನುಗುಣವಾಗಿದೆ. 109ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ.
ಯಾವುದೇ ಉಲ್ಲಂಘನೆಯನ್ನು ಗುರುತಿಸಿದ ಸಾರ್ವಜನಿಕರು BWSSB ಕಾಲ್ ಸೆಂಟರ್ ಸಂಖ್ಯೆ 1916ಗೆ ಕರೆ ಮಾಡಿ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸುವಂತೆ ಆದೇಶದಲ್ಲಿ ಒತ್ತಾಯಿಸಲಾಗಿದೆ. ನಗರದಲ್ಲಿ ಸುಮಾರು 1.4 ಕೋಟಿ ಜನಸಂಖ್ಯೆ ಇದೆ. ಎಲ್ಲರಿಗೂ ಕುಡಿಯುವ ನೀರನ್ನು ಒದಗಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಟ್ಯಾಂಕರ್ ಮಾಲೀಕರು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪದ ಕಾರಣ ಕಳೆದ ವಾರ, ಮಂಡಳಿಯು ಟ್ಯಾಂಕರ್ ನೀರಿನ ಬೆಲೆಯನ್ನು ನಿಗದಿಪಡಿಸಿ ಆದೇಶ ಹೊರಡಿಸಿತು. ಬಿಡಬ್ಲ್ಯೂಎಸ್ಎಸ್ಬಿ ಸುತ್ತೋಲೆಯ ಪ್ರಕಾರ, 5 ರಿಂದ 10 ಕಿ.ಮೀ ದೂರವಿದ್ದರೆ, 6000 ಲೀಟರ್ ನೀರಿನ ಟ್ಯಾಂಕರ್ ಬೆಲೆ 750 ರೂ., 8000 ಲೀಟರ್ ನೀರಿನ ಟ್ಯಾಂಕರ್ ಬೆಲೆ 850 ರೂ. ಮತ್ತು 12,000 ಲೀಟರ್ ನೀರಿನ ಟ್ಯಾಂಕರ್ ಬೆಲೆ 1200 ರೂ. ಆಗಿರುತ್ತದೆ. ನೀರನ್ನು ವ್ಯರ್ಥ ಮಾಡದಂತೆ ಮತ್ತು ವಿವೇಚನೆಯಿಂದ ಬಳಸುವಂತೆ ಜನರಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ.