ಹೊಸದಿಗಂತ ವರದಿ ಅಂಕೋಲಾ :
ಮಳೆಯಬ್ಬರ ವ್ಯಾಪಕವಾಗಿರುವಂತೆಯೇ ಕಡಲಬ್ಬರ ಅಂಕೆ ಮೀರುತ್ತಿದ್ದು ತಾಲೂಕಿನ ವಿವಿದೆಡೆ ಕಡಲಕೊರೆತದಿಂದಾಗಿ ತಟವಾಸಿಗಳಲ್ಲಿ ಆತಂಕ ಶುರುವಾಗಿದೆ.
ಕಳೆದ ಮೂರು ದಿನಗಳಂದ ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಡಲಿನಲ್ಲೂ ಆಳೆತ್ತರದ ಅಲೆಗಳು ಎದ್ದು ತೀರ ಪ್ರದೇಶಕ್ಕೆ ನುಗ್ಗತೊಡಗಿವೆ. ಇಲ್ಲಿಯ ಹಾರವಾಡ, ಬೇಲೆಕೇರಿ, ಗಾಬೀತ ಮತ್ತು ಹರಿಕಂತ್ರ ಕೇಣಿ, ಬೆಳಂಬಾರ , ಮಂಜಗುಣಿ ಮತ್ತಿತರ ಕಡೆ ತೀರ ಪ್ರದೇಶದಲ್ಲಿ ಕಡಲ ಅಲೆಗಳು ಅಬ್ಬರಿಸಿ ಒಳ ನುಗ್ಗುತ್ತಿದ್ದು ತಟಪ್ರದೇಶ ಕೊರೆದುಹೋಗುತ್ತಿದೆ.
ಶಾಶ್ವತ ತಡೆ ಇಲ್ಲ :
ಕಡಲ ಕೊರೆತ ತಡೆಯಲು ಶಾಶ್ವತ ಪರಿಹಾರ ಇನ್ನೂ ಆಗದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ತೀರವಾಸಿಗಳು ಕೈಯಲ್ಲಿ ಜೀವ ಹಿಡಿದು ಬದುಕುವಂತಾಗಿದೆ. ತಾಲೂಕುಆಡಳಿತ ಈಗಾಗಲೇ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ಮೀನುಗಾರರೂ ಸಹ ತಮ್ಮ ದೋಣಿ ಬಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.