ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ನೆತ್ತಿ ಸುಡುವ ಬಿಸಿಲು ದಿನಕಳೆದಂತೆ ಹೆಚ್ಚಾಗುತ್ತಲೇ ಇದ್ದು, ಕೆಲವು ಜಿಲ್ಲೆಗಳು ಗರಿಷ್ಠ ತಾಪಮಾನದ ಗಡಿಯನ್ನು ದಾಟಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ 6 ಜಿಲ್ಲೆಗಳು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಡಿದಾಟಿದೆ. ಈ ಪೈಕಿ ಬಿಸಿಲನಾಡು ರಾಯಚೂರು ಅಗ್ರ ಸ್ಥಾನದಲ್ಲಿದ್ದು, 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಜಿಲ್ಲೆಯ ಜನ ಕಂಗಾಲಾಗಿದ್ದು, ಕನಿಷ್ಠ ತಾಪಮಾನ ಏರಿಕೆಯಾಗಿರುವುದು ತಲೆ ಸುಡುವಂತೆ ಮಾಡಿದೆ.
ರಾಯಚೂರು ಬಳಿಕ ಕೊಪ್ಪಳ 40.7 ಡಿಗ್ರಿ, ಉತ್ತರಕನ್ನಡ ಮತ್ತು ಧಾರವಾಡದಲ್ಲಿ 40.5 ಡಿಗ್ರಿ, ಕಲಬುರಗಿ 40.4 ಡಿಗ್ರಿ ಹಾಗೂ ಬಾಗಲಕೋಟೆಯಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ.
ಬೆಂಗಳೂರಲ್ಲಿ ಸರಾಸರಿ 34.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ವಿಜಯಪುರ, ರಾಯಚೂರು, ಬೆಳಗಾವಿ, ಗದಗ, ಕೊಪ್ಪಳ ಸೇರಿದಂತೆ ಹಲವೆಡೆ 37 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ, ಹಾವೇರಿ, ಧಾರವಾಡ ಸೇರಿದಂತೆ ಹಲವೆಡೆ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇಂತಹ ವಾತಾವರಣದಲ್ಲಿ ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ತ್ರಾಸವಾಗಿದೆ. ಮಿತಿ ಮೀರಿದ ಬಿಸಿಲಿಗೆ ತಲೆನೋವು, ವಾಂತಿ, ಒಣತ್ವಚೆ ಮತ್ತು ಆರೋಗ್ಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯಕ್ಕೆ ಮಳೆ ಬರೋದು ಯಾವಾಗ?
ರಾಜ್ಯದಲ್ಲಿ ತಾಪಮಾನ ಏರಿಕೆ ನಡುವೆಯೇ ಹಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮಾರ್ಚ್ 14ರ ಒಳಗೆ ರಾಜ್ಯದಲ್ಲಿ ಬೇಸಿಗೆ ಮಳೆಯಾಗುವ ಮುನ್ಸೂಚನೆಯನ್ನು ಕೊಟ್ಟಿದೆ.ಇಂದಿನಿಂದ ಪೂರ್ವ ಮುಂಗಾರು ಮಾರುತ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಮಾರ್ಚ್14ರ ಒಳಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.