ಮಣಿಪುರದಲ್ಲಿ ಕರ್ಫ್ಯೂ ಸಡಿಲಿಕೆ: ಮಾರುಕಟ್ಟೆಗಳಲ್ಲಿ ಜನರ ದಂಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಬುಧವಾರ ಕರ್ಫ್ಯೂ ಸಡಿಲಿಸಿದ್ದರಿಂದ, ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗಳಿಗೆ ಮುಗಿಬಿದ್ದರು. ನಗರದ ಇಮಾ ಮಾರುಕಟ್ಟೆಗೆ ಜನಸಾಗರವೇ ಹರಿದು ಬಂದಿತ್ತು.
ನಗರದ ಪೆಟ್ರೋಲ್ ಪಂಪ್‌ಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಬೆಳಗ್ಗೆ 6 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು. ಇಂದು ಬೆಳಗ್ಗೆ 5ರಿಂದ 11ರವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ, ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಗೆ ಬರಲು ಅನುಮತಿಸಲಾಗುವುದು ಮತ್ತು ಇತರ ಉದ್ದೇಶಗಳಿಗಾಗಿ ಸೇರಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 60 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದವರನ್ನು ವಿಚಾರಣೆಗೆ ಒಳಪಡಿಸಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಮತ್ತು ಅಶಾಂತಿ ನಿಯಂತ್ರಿಸುವಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.

ಮಣಿಪುರ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 60 ಜನರು ಸಾವನ್ನಪ್ಪಿದ್ದಾರೆ ಮತ್ತು 231 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಮೇ 3 ರಂದು ನಡೆದ ಅಹಿತಕರ ಘಟನೆಗಳಲ್ಲಿ (ಗಲಭೆ) ಸುಮಾರು 1,700 ಮನೆಗಳು ಸುಟ್ಟು ಭಸ್ಮವಾಗಿವೆ. ಒಂದು ವಾರದ ಹಿಂದೆ ಮಣಿಪುರದ ಬಹುಸಂಖ್ಯಾತ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ನಂತರ ಈಶಾನ್ಯ ರಾಜ್ಯದಲ್ಲಿ ಘರ್ಷಣೆಗಳು ಸ್ಫೋಟಗೊಂಡವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!