ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕನ್, ಮಟನ್ ಬಿಟ್ಟು ಮೀನು ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಶೇಕಡಾ 30 ರಷ್ಟು ಏರಿಕೆಯಾಗಿದೆ.
ಎಲ್ಲಾ ರೀತಿಯ ಸಮುದ್ರ ಮೀನುಗಳ ದರದಲ್ಲಿ ವ್ಯತ್ಯಾಸ ಆಗಿದೆ. ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಕ್ಕಿ ಜ್ವರದ ಕಾರಣ ಕೋಳಿ ಮಾಂಸ ಸಿಗುತ್ತಿಲ್ಲ. ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ.
ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಾಗಿರುವುದು ಕೂಡ ಮೀನುಗಾರಿಕೆ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಿದೆ ಎನ್ನಲಾಗಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಮೇಲ್ಮೈಗೆ ಬರುವುದನ್ನು ಕಡಿಮೆ ಮಾಡಿವೆ. ತಂಪಾದ ವಾತಾವರಣ ಅರಸಿ ಸಮುದ್ರದ ಆಳಕ್ಕೆ ವಲಸೆ ಹೋಗುತ್ತಿವೆ ಎನ್ನಲಾಗಿದೆ. ಮೀನುಗಳು ಸಮುದ್ರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವಾಗ ಮೀನುಗಾರರ ಬಲೆಗೆ ಸುಲಭವಾಗಿ ಬೀಳುತ್ತವೆ. ಆದರೆ ಯಾವಾಗ ಅವುಗಳು ಸಮುದ್ರದಾಳದಲ್ಲಿ ಆಶ್ರಯ ಪಡೆಯುತ್ತವೆಯೋ ಅಂತಹ ಸಂದರ್ಭದಲ್ಲಿ ಮೀನುಗಾರರ ಬಲೆಗೆ ಸಿಗುವುದಿಲ್ಲ. ಇದರ ಪರಿಣಾಮವಾಗಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.