ಹೊಸದಿಗಂತ ವರದಿ, ಮಂಡ್ಯ :
ಹಾಡು ಹಗಲೇ ಸರಗಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಕೃಷ್ಣಾಪುರ ಗ್ರಾಮದ ಶ್ರೀನಿವಾಸ(30) ಎಂಬ ಯುವಕನೇ ಸರಗಳ್ಳತನ ಮಾಡಲು ಪ್ರಯತ್ನಿಸಿ ಸಿಕ್ಕಿ ಬಿದ್ದು, ಸಾರ್ವಜನಿಕರಿಂದ ಗೂಸಾ ತಿಂದು ಪೊಲೀಸರ ಅಥಿತಿಯಾಗಿದ್ದಾನೆ.
ಪಟ್ಟಣದ ಹೇಮಗಿರಿ ರಸ್ತೆಯಲ್ಲಿ ವಾಸವಿರುವ ವಿಶ್ರಾಂತ ಎ.ಎಸ್.ಐ ಶೀಳನೆರೆ ಸೋಮಶೇಖರ್ ಎಂಬುವವರು ತಮ್ಮ ವಾಣಿಜ್ಯ ಮಳಿಗೆಯಲ್ಲಿ ನಡೆಸುತ್ತಿರುವ ಪ್ರಾವಿಷನ್ ಸ್ಟೋರ್‌ಗೆ ಟಿವಿಎಸ್ ಸ್ಕೂಟರ್‌ನಲ್ಲಿ ಬಂದ ಸರಗಳ್ಳ ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದಾನೆ. ಅಂಗಡಿಯ ಬಳಿ ಯಾರೂ ಇಲ್ಲದ ಸಮಯ ನೋಡಿ ಏಕಾಏಕಿ ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ 50ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಓಡಲು ಯತ್ನಿಸಿದ್ದಾನೆ. ಕೂಡಲೆ ಎಚ್ಚೆತ್ತ ಮಹಿಳೆ ಅಲ್ಲೇ ಇದ್ದ ಮಚ್ಚಿನಿಂದ ಸರಗಳ್ಳನ ಮೇಲೆ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ಯುವಕ ಕಾಲ್ಕಿತ್ತಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಸರಗಳ್ಳನನ್ನು ಹಿಡಿದು ಪಟ್ಟಣ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನವೀನ್ ಅವರಿಗೆ ಒಪ್ಪಿಸಿದ್ದಾರೆ.