ಹೊಸದಿಗಂತ ವರದಿ,ಮದ್ದೂರು:
ಸ್ವಾರ್ಥದ ರಾಜಕಾರಣ, ದೇಶಹಿತ, ಜನಹಿತ ರಾಜಕಾರಣ ಯಾವುದು ಎಂಬುದನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಜನಹಿತ, ದೇಶಹಿತದ ರಾಜಕಾರಣವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‌್ಯದರ್ಶಿ ಸಿ.ಟಿ. ರವಿ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ನಮಗಿರುವ ಇವತ್ತಿನ ರಾಜಕೀಯ ವಾತಾವರಣದಲ್ಲಿ ಕಷ್ಟಸಾಧ್ಯವಾದ ಸ್ಥಾನಗಳಿವೆ. ಅಸಾಧ್ಯವಾದುದು ಯಾವುದೂ ಇಲ್ಲಘಿ .ಹಾಗಾಗಿ ಜನಹಿತ ಮತ್ತು ದೇಶಹಿತಕ್ಕೆ ಎಂದೆಂದಿಗೂ ಮನ್ನಣೆ ಇದ್ದೇ ಇದೇ ಎಂದು ಹೇಳಿದರು.
ಇಲ್ಲಿ ಸ್ಥಳೀಯವಾಗಿ ನಾಯಕತ್ವ ದುರ್ಬಲವಾಗಿದೆ. ಎಲ್ಲೆಲ್ಲಿ ದುರ್ಬಲವಾಗಿದೆಯೋ ಅಲ್ಲಿ ನಾವು ಕಾರ‌್ಯಕರ್ತರನ್ನು ಜೋಡಿಸುವುದು, ಸ್ಥಳೀಯ ನಾಯಕತ್ವವನ್ನು ಬಲಗೊಳಿಸುವುದು, ಕಾರ‌್ಯಕರ್ತರ ಜಾಲವನ್ನು ವಿಸ್ತರಿಸುವುದು, ನಮ್ಮ ಕಾರ‌್ಯಕ್ರಮ, ಸಿದ್ಧಾಂತದ ಆಧಾರದಲ್ಲಿ ಮತ ಬ್ಯಾಂಕ್ ವೃದ್ಧಿಗೊಳಿಸುವುದು, ಅದರಲ್ಲಿ ನಾವು ಯಶಸ್ಸು ಕಾಣುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಧೃವೀಕರಣಕ್ಕೆ ನಾಂದಿ :
ಹಳೇ ಮೈಸೂರು ಮಾತ್ರವಲ್ಲ, 7 ಈಶಾನ್ಯ ರಾಜ್ಯಗಳ ಪೈಕಿ 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಎಲ್ಲ ರಾಜ್ಯಗಳಲ್ಲೂ ಸಹ ನಮ್ಮ ಪಕ್ಷದ ನೀತಿ, ನಿಯತ್ತು, ನೇತೃತ್ವದ ಆಧಾರದ ಮೇಲೆ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡುತ್ತೇವೆ. ಮಂಡ್ಯ, ಮೈಸೂರು, ತುಮಕೂರು, ಹಾಸನದಲ್ಲೂ ಸಹ ರಾಜಕೀಯ ಧೃವೀಕರಣಕ್ಕೆ ಕೈ ಹಾಕಿದ್ದೇವೆ ಎಂದು ಹೇಳಿದರು.