ನಾಳೆ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ: ಸವಾರರಿಗೆ ಸಿಗುತ್ತಾ ತೈಲ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಕಮಿಷನ್ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ, ತೈಲ ಖರೀದಿ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.
ಆದರೆ ಈ ವೇಳೆ ಎಂದಿನಂತೆ ಬಂಕ್‌ಗಳು ಕಾರ್ಯನಿರ್ವಹಿಸಲಿದ್ದು, ವಾಹನ ಸವಾರರಿಗೆ ಇಂಧನ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದೆ.
2017ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ದ್ವಿಗುಣವಾಗಿರುವ ಹಿನ್ನೆಲೆಯಲ್ಲಿ ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರಂತರವಾಗಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಇಂಧನ ಬಳಕೆಯಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಸಾವಿರಾರು ಬಂಕ್ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ನಾವು ಆರ್ಥಿಕ ಸಮಸ್ಯೆಗೆ ಸಿಲುಕಿದ್ದೇವೆ. ಇಂಧನ ದರವನ್ನು ಏಕಾಏಕಿ ಇಳಿಕೆ ಮಾಡಿದ್ದರಿಂದ ಗ್ರಾಹಕರಿಗೆ ಒಳಿತಾಗಿದ್ದರೂ ನಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಾಗಾಗಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಒಂದು ದಿನ ಮಾತ್ರ ಇಂಧನ ಖರೀದಿಸದೆ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಬಸವೇಗೌಡ ಹೇಳಿದ್ದಾರೆ.
ಭಾರತದ ಅತಿ ದೊಡ್ಡ ತೈಲೋತ್ಪನ್ನ ಹಾಗೂ ಸಂಸ್ಕರಣಾ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ.(ಐಒಸಿಎಲ್), 2,036, ಭಾರತ್ ಪಟ್ರೋಲಿಯಂ ಕಾರ್ಪೋರೇಷನ್ ಲಿ. (ಬಿಪಿಸಿಎಲ್) 1,208, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ಪಿಸಿಎಲ್) 1,800 ಹಾಗೂ ಖಾಸಗಿ 487 ಸೇರಿ ಒಟ್ಟು 5,531 ಪೆಟ್ರೋಲ್ ಬಂಕ್‌ಗಳು ರಾಜ್ಯದಲ್ಲಿವೆ. ಐಒಸಿಎಲ್ ಬಂಕ್‌ಗಳಲ್ಲಿ ಈಗಾಗಲೇ ಇಂಧನ ಸಂಗ್ರಹವಾಗಿದ್ದರೂ ತೈಲ ಪೂರೈಕೆಗೆ ಮಿತಿ ಹೇರಿದ ಹಿನ್ನೆಲೆ ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ನ ಕೆಲ ಬಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಧನ ಲಭ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಮಾಲೀಕರು ‘ನೋ ಸ್ಟಾಕ್’ ಫಲಕಗಳನ್ನು ಅಳವಡಿಸಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!