Sunday, October 1, 2023

Latest Posts

ಪಿಎಚ್‌ಡಿ ಪದವಿ: ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಗೆ ಅಭಿನಂದನೆ

ಹೊಸದಿಗಂತ ವರದಿ,ಮಂಗಳೂರು:

ಸಮಾಜಕ್ಕೆ ದಾರಿದೀಪವಾಗಿರುವ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ ಮಹಾಪ್ರಬಂಧವನ್ನು ಪುಸ್ತಕ ರೂಪದಲ್ಲಿ ಹೊರತರುವಲ್ಲಿ ವಿಶ್ವವಿದ್ಯಾನಿಲಯ ಒಂದು ತಿಂಗಳೊಳಗೆ ಅನುಮತಿ ನೀಡಲಿದೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.
ಆದಿ ಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಸ್ವಾಮೀಜಿ, ಕಾವೂರಿನ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಮಂಡಿಸಿದ ‘ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿಯನ್ನು ನೀಡಿದ ಹಿನ್ನೆಲೆಯಲ್ಲಿ ಬಿಜಿಎಸ್ ಸೇವಾ ಸಮಿತಿ ಮತ್ತು ಶ್ರೀ ಮಠದ ಸದ್ಭಕ್ತರ ನೇತೃತ್ವದಲ್ಲಿ ಕಾವೂರು ಬಿಜಿಎಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಕೃತ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರೆಡೂ ಹಿಂದೂ ಸಂಸ್ಕೃತಿಯನ್ನು ಅನಾವರಣಗೊಳಿಸಿವೆ. ಇದರಿಂದಾಗಿ ದೇಶ ಸಶಕ್ತವಾಗಿದೆ. ಸ್ವಾಮೀಜಿಯವರು ಡಿಗ್ರಿಯ ಸಂಪಾದನೆಗಾಗಿ ಮಹಾಪ್ರಬಂಧ ಮಂಡಿಸಿಲ್ಲ. ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಆತ್ಮಶೋಧನೆಯ ಮೂಲಕ ಬಾಲ ಗಂಗಾಧರನಾಥ ಮಹಾಸ್ವಾಮೀಜಿಗಳ ಕುರಿತಾಗಿ ಬರೆದಿದ್ದಾರೆ. ಕೈ ತೊಳೆದು ಮುಟ್ಟಬೇಕಾದ ಮೌಲ್ಯಯುತ ಪ್ರಬಂಧ ಇದಾಗಿದೆ ಎಂದು ಪ್ರೊ.ಯಡಪಡಿತ್ತಾಯ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸ್ವಾಮೀಜಿಯವರನ್ನು ಶಾಲು, ಫಲತಟ್ಟೆ, ಹಾರ ಮತ್ತು ಸುಂದರವಾದ ಸರಸ್ವತಿಯ ಮೂರ್ತಿಯನ್ನಿತ್ತು ಗೌರವಿಸಲಾಯಿತು. ಮಠದ ಭಕ್ತರು ಮತ್ತು ಸಂಘಸಂಸ್ಥೆಗಳಿಂದಲೂ ಗೌರವಾರ್ಪಣೆ ನಡೆಯಿತು.
ಮಹಾಸ್ವಾಮೀಜಿಗಳು ವಿಶ್ವವಿದ್ಯಾನಿಲಯವಿದ್ದಂತೆ: ಧರ್ಮಪಾಲನಾಥ ಶ್ರೀ
ಅಭಿನಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಡಾ.ಧರ್ಮಪಾಲನಾಥ ಸ್ವಾಮೀಜಿ, ಬೃಹತ್ ಸಾಗರವಾಗಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ವ್ಯಕ್ತಿತ್ವವೆಂಬ ಸಾಗರದೊಳಗೆ ಮುಳುಗಿದಾಗ ಸಾವಿರಾರು ಮುತ್ತು, ಅನರ್ಘ್ಯ ರತ್ನಗಳು ಸಿಗುತ್ತವೆ. ಲಕ್ಷಾಂತರ ಮಂದಿಯ ನೋವಿಗೆ ಸ್ಪಂದಿಸಿದ, ಶಿಕ್ಷಣದ ದಾಹ ತಣಿಸಿದ ಅವರ ವ್ಯಕ್ತಿತ್ವವನ್ನು ವಿವರಿಸುವುದು ಕಷ್ಟಸಾಧ್ಯ. ಅವರು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ನನ್ನ ಪ್ರೇರಕ ಶಕ್ತಿಯಾದ ಗುರುಗಳ ಪಾದಗಳಿಗೆ ಮಹಾಪ್ರಬಂಧವನ್ನು ಅರ್ಪಿಸುತ್ತಿದ್ದೇನೆ ಎಂದರು.
‘ಹೊಸ ದಿಗಂತ’ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಕಾರಿ ಪಿ.ಎಸ್.ಪ್ರಕಾಶ್ ಅಭಿನಂದನಾ ನುಡಿಗಳನ್ನಾಡಿದರು.
ಸಮಾಜಕ್ಕೆ ಸಂತಶ್ರೇಷ್ಠರ ಕೊಡುಗೆ: ಪಿ.ಎಸ್.ಪ್ರಕಾಶ್
ಈ ದೇಶದ ಸಂಸ್ಕೃತಿ, ಆಚಾರ ವಿಚಾರ, ಪರಂಪರೆಗಳ ವೈಶಿಷ್ಟ್ಯತೆಯೇ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ದೇಶಕ್ಕೆ ಸಂತ ಶ್ರೇಷ್ಠರ ಕೊಡುಗೆ ಮಹತ್ತರವಾದುದು. ಸಂಸ್ಕೃತಿಯ ಅಧಃಪತನವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಮಹಾನ್ ಕೃತಿಗಳ ಅಗತ್ಯವಿದೆ. ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು, ದೊಡ್ಡ ಸಾಗರವಾಗಿರುವ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಬದುಕಿನ ಕುರಿತಂತೆ ಬೆಳಕು ಚೆಲ್ಲುವ ಮಹತ್ತರವಾದ ಕಲಸ ಮಾಡಿದ್ದಾರೆ. ಸ್ವಾಮೀಜಿಗಳು ಮಂಡಿಸಿರುವ ಮಹಾ ಪ್ರಬಂಧ, ಬೃಹತ್ ಅಧ್ಯಯನ ಗ್ರಂಥವಾಗಿ ಮೂಡಿಬಂದಿದೆ ಎಂದು ಪಿ.ಎಸ್.ಪ್ರಕಾಶ್ ಹೇಳಿದರು.
ಶಾಸಕ ಡಾ.ವೈ.ಭರತ್ ಶೆಟ್ಟಿ, ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ.ಎಂ.ಬಿ.ಪುರಾಣಿಕ್, ಉಪಮೇಯರ್ ಸುಮಂಗಳಾ ರಾವ್, ಬಿಜಿಎಸ್ ಸಂಸ್ಥೆಯ ಪ್ರಬಂಧಕರಾದ ಸುಬ್ಬ ಕಾರಡ್ಕ ಮತ್ತಿತತರರು ಉಪಸ್ಥಿತರಿದ್ದರು.
ಕಾವೂರು ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಪೈ ಸ್ವಾಗತಿಸಿ, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!