ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್‌ಧಾಮ್ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಆವರಣದಲ್ಲಿ ಫೋಟೋಗ್ರಫಿ ಮತ್ತು ವೀಡಿಯೊಗ್ರಫಿಯನ್ನು ಸಂಪೂರ್ಣ ನಿಷೇಧಿಸಿರುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದ ಸಮಿತಿಯು ಆವರಣದಾದ್ಯಂತ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದು, ಭಕ್ತಾದಿಗಳು ಚಿತ್ರಗಳನ್ನು, ವಿಡಿಯೋಗಳನ್ನು ತೆಗೆದುಕೊಳ್ಳುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ದೇವಸ್ಥಾನದ ಆವರಣದ ಹಲವೆಡೆ ಬೋರ್ಡ್ ಹಾಕಲಾಗಿದ್ದು, ‘ಮೊಬೈಲ್ ಫೋನ್ ಹಿಡಿದು ದೇವಸ್ಥಾನದ ಆವರಣ ಪ್ರವೇಶಿಸಬೇಡಿ, ದೇವಾಲಯದ ಒಳಗೂ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿʼ ಎಂದು ಸೂಚನಾ ಫಲಕದಲ್ಲಿ ಬರೆದಿದ್ದಾರೆ
ಕೆಲವು ಯಾತ್ರಾರ್ಥಿಗಳ ಅಸಭ್ಯ ವರ್ತನೆಯಿಂದಾಗಿ ತಪ್ಪು ಸಂದೇಶ ರವಾನೆಯಾದ ನಂತರ ದೇವಾಲಯ ಸಮಿತಿಯು ಈ ನಿಷೇಧವನ್ನು ವಿಧಿಸಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇದಾರನಾಥದಲ್ಲಿ ಎಚ್ಚರಿಕೆ ಫಲಕಗಳನ್ನು ಸಹ ಅಳವಡಿಸಲಾಗಿದೆ ಎಂದು ದೇವಾಲಯದ ಸಮಿತಿ ಅಧ್ಯಕ್ಷರು ತಿಳಿಸಿದರು.
ಈ ತಿಂಗಳ ಆರಂಭದಲ್ಲಿ, ಉತ್ತರಾಖಂಡದ ಕೇದಾರನಾಥ ದೇವಾಲಯದ ಬಳಿ ಹುಡುಗಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಿರುವ ವೈರಲ್ ವೀಡಿಯೊದ ನಂತರ ಈ ಪುಣ್ಯಕ್ಷೇತ್ರದ ಸುತ್ತಲೂ ವೀಡಿಯೊಗಳನ್ನು ಮಾಡುವುದನ್ನು ನಿಷೇಧಿಸುವಂತೆ ಕೋರಿ ಕೇದಾರನಾಥ ಧಾಮ್ ಪೊಲೀಸರಿಗೆ ಪತ್ರ ಬರೆದಿದೆ. ದೇವಾಲಯದ ಸುತ್ತಲಿನ ಪ್ರದೇಶವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯೂಟ್ಯೂಬ್ ಕಿರುಚಿತ್ರಗಳು/ವೀಡಿಯೋಗಳು/ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.