ಹೊಸದಿಂಗತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ದೇವಾಲಯದ ಗರ್ಭಗೃಹಕ್ಕೆ ಅಳವಡಿಸಲಾಗಿರುವ ಸ್ವರ್ಣ ದ್ವಾರದ ಚಿತ್ರಗಳು ವೈರಲ್ ಆಗಿದೆ.
ಚಿತ್ರದಲ್ಲಿ ಪ್ರಕಟವಾಗಿರುವುದು ರಾಮ ಮಂದಿರದ ಗರ್ಭಗೃಹದ 11ನೇ ಸ್ವರ್ಣ ದ್ವಾರವಾಗಿದ್ದು, ಮಂದಿರದಲ್ಲಿ ಒಟ್ಟು 13 ಇದೇ ರೀತಿಯ ಬಾಗಿಲುಗಳು ಇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಮಾಹಿತಿ ನೀಡಿದೆ. ಗರ್ಭಗೃಹದ ಎದುರು ಇರುವ ಗುರು ಮಂಟಪಕ್ಕೆ ಹಾಕಲಾಗಿರುವ ಚಿನ್ನದ ದ್ವಾರ ಇದಾಗಿದೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಸ್ವರ್ಣ ದ್ವಾರದ ಚಿತ್ರಗಳು ವೈರಲ್ ಆದ ಬೆನ್ನಲ್ಲಿಯೇ ರಾಮ ಭಕ್ತರು ದ್ವಾರದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ದೇವಾಲಯದಲ್ಲಿ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಮಂದಿರ ಉದ್ಘಾಟನೆಯ ಆಹ್ವಾನವನ್ನು ಪಡೆದುಕೊಂಡಿದ್ದು, ಅದರೊಂದಿಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಈಗಾಗಲೇ 25 ಸಾವಿರಕ್ಕೂ ಅಧಿಕ ಹಿಂದೂ ಧಾರ್ಮಿಕ ನಾಯಕರಿಗೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ನೀಡಲಾಗಿದ್ದು, 10 ಸಾವಿರ ವಿಶೇಷ ಅತಿಥಿಗಳಿಗೂ ರಾಮಮಂದಿರ ಉದ್ಘಾಟನೆಯಲ್ಲಿ ಆಹ್ವಾನ ನೀಡಲಾಗಿದೆ.
2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಅಂದಿನಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ. ಪ್ರಸ್ತುತ ಮಂದಿರದ ಕಾಮಗಾರಿಗಳು ಬಹುತೇಕ ಮುಕ್ತಾಯಗೊಂಡಿದೆ.