ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಯಾಮಿಯಿಂದ ಚಿಲಿಗೆ ಹೊರಟಿದ್ದ LATAM ಏರ್‌ಲೈನ್ಸ್ ವಾಣಿಜ್ಯ ವಿಮಾನದ ಪೈಲಟ್ ಹೃದಯಾಘಾತದಿಂದ ಮೃತಪಟ್ಟಿದ್ದು, ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
271 ಪ್ರಯಾಣಿಕರೊಂದಿಗೆ ಚಿಲಿಯ ಸ್ಯಾಂಟಿಯಾಗೊಗೆ ತೆರಳುತ್ತಿದ್ದ ಸಂದರ್ಭದಲ್ಲಿ, ರಾತ್ರಿ 11 ಗಂಟೆಗೆ ವಿಮಾನದ ಟಾಯ್ಲಟ್‌ನಲ್ಲಿ ಪೈಲೆಟ್ ಕುಸಿದು ಬಿದ್ದರು. ಕೂಡಲೇ ಸಹಪೈಲೆಟ್ ವಿಮಾನವನ್ನು ಪನಾಮ ನಗರದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.
ಮೃತ ಪೈಲೆಟ್ ಅನ್ನು ಇವಾನ್ ಆಂಡೂರ್ ಎಂದು ಗುರುತಿಸಿದ್ದು, ಇವರ ವಯಸ್ಸು 56 ವರ್ಷ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನರ್ಸ್ ಇಸಡೋರಾ ಮತ್ತು ಇಬ್ಬರು ವೈದ್ಯರು ಪೈಲಟ್‌ಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ..ಅವರ ಪ್ರಯತ್ನ ಫಲ ಕೊಡಲಿಲ್ಲ. ಪನಾಮ ಸಿಟಿಯಲ್ಲಿ ವಿಮಾನವನ್ನು ಇಳಿಸಿದ ಕೂಡಲೇ ಪರೀಕ್ಷಿಸಿದ ವೈದ್ಯರು ಪೈಲೆಟ್ ಅದಾಗಲೇ ಸಾವನ್ನಪ್ಪಿರುವುದಾಗಿ ಖಚಿತಪಡಿಸಿದರು. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ರಾತ್ರಿ ಪನಾಮ ಸಿಟಿ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿತ್ತು.
ಪೈಲಟ್ ಸಾವಿಗೆ LATAM ಏರ್‌ಲೈನ್ಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ವಿಮಾನ ಹಾರಾಟದ ಸಮಯದಲ್ಲಿ ಜೀವಗಳನ್ನು ಉಳಿಸುವ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿದೆ ಎಂದು LATAM ಏರ್‌ಲೈನ್ಸ್ ಹೇಳಿದೆ. ಪೈಲಟ್ ಮೃತಪಟ್ಟರೂ ಸಹ ಪೈಲಟ್ ಗಳು ತುರ್ತು ಭೂಸ್ಪರ್ಶ ಮಾಡಿ ಜನರ ಜೀವ ಕಾಪಾಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಯಾವುದೇ ಅಡೆ-ತಡೆಯಿಲ್ಲದೆ, ಲ್ಯಾಂಡಿಗ್ ಆಗಿದ್ದಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.