ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಬಂಧಿತನಾಗಿದ್ದ ಉಲ್ಫಾ ಸಂಘಟನೆಯ ಶಂಕಿತ ಉಗ್ರನಿಂದ ಸ್ಫೋಟಕ ರಹಸ್ಯವೊಂದು ಬಯಲಾಗಿದೆ. ಶಂಕಿತ ಉಗ್ರನ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಅಸ್ಸಾಂ ಎನ್‌ಐಎ ಅಧಿಕಾರಿಗಳು ಮಂಗಳವಾರ ಅಸ್ಸಾಂನ ಉತ್ತರ ಲಖೀಂಪುರದಲ್ಲಿ ಜೀವಂತ ಐಇಡಿಗಳನ್ನ (ಸುಧಾರಿತ ಸ್ಫೋಟಕ ಸಾಧನ) ವಶಕ್ಕೆ ಪಡೆದಿದ್ದಾರೆ.
ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಶಂಕಿತ ಉಗ್ರ ಗಿರಿಸ್ ಬೋರಾ ಅಲಿಯಾಸ್ ಗೌತಮ್, ಅಸ್ಸಾಂನಲ್ಲಿ ಐಇಡಿ ಇಟ್ಟ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದು, ಉಲ್ಫಾ(I) ಸಂಘಟನೆಯ ನಾಯಕರು ಹೇಳಿದಂತೆ ಐಇಡಿಗಳನ್ನ ಇಟ್ಟಿದ್ದೆ. ಆಗಸ್ಟ್ 15ರಂದು ಸ್ಫೋಟಿಸಲು ಸಂಜು ರೂಪಿಸಲಾಗಿತ್ತು ಎಂದೂ ಸಹ ಒಪ್ಪಿಕೊಂಡಿದ್ದಾನೆ.
ಶಂಕಿತ ಉಗ್ರನ ಮಾಹಿತಿ ಮೇರೆಗೆ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಲಖೀಂಪುರ ಜಿಲ್ಲೆಯಲ್ಲಿ ಇಟ್ಟಿದ್ದ ಕೆಲವು ಜೀವಂತ ಐಇಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತನಿಖೆಯನ್ನೂ ಮುಂದುವರಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಶೀದ್ ಆಲಿ ಸಿದ್ಧಕಿ ಕುಟುಂಬದ ತನಿಖೆ ಮುಂದುವರಿದಿದೆ. IB, NIA ಮತ್ತು ಆನೇಕಲ್ ಉಪವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಹಿನ್ನೆಲೆ ಭಾರತಕ್ಕೆ ಅಕ್ರಮವಾಗಿ ಎಂಟ್ರಿ ಕೊಟ್ಟ ಉದ್ದೇಶ ಮತ್ತು ಭಾಗ ದಾಖಲೆಗಳ ಸೃಷ್ಟಿ ಬಗ್ಗೆ ತನಿಖೆಯನ್ನು ಕೇಂದ್ರಿಕರಿಸಲಾಗಿದೆ.
ಅಸ್ಸಾಂ ಎನ್ಐಎ ಟೀಂ, ಶಂಕಿತ ಉಗ್ರನನ್ನು ಸೆ.24 ರಂದು ಬಂಧಿಸಿತ್ತು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಆತನನ್ನು ಎನ್ಐಎ ತಂಡ ಅಸ್ಸಾಂಗೆ ಕರೆದೊಯ್ದಿತ್ತು.