ಆ ಗ್ಯಾಂಗ್‌ನಲ್ಲಿ ಸ್ನೇಹಿತನೊಬ್ಬನಿದ್ದ. ಎಲ್ಲರಿಗೂ ಫ್ರೀಯಾಗಿ ಜ್ಞಾನ ಹಂಚುತ್ತಿದ್ದ. ದೊಡ್ಡ ದೊಡ್ಡ ವಿಷಯಗಳನ್ನು ಈಸಿಯಾಗಿ ಅರ್ಥವಾಗೋ ರೀತಿ ಹೇಳಿ ಬಿಡುತ್ತಿದ್ದ. ಇವನು ಕಾಲೇಜಿನಲ್ಲಿ ಎಲ್ಲರಿಗೂ ಬೆಸ್ಟ್ ಫ್ರೆಂಡ್.
ಹೀಗೆ ಸ್ನೇಹಿತೆಯೊಬ್ಬಳು ಒಂದು ಬಾರಿ ನನ್ನ ಬಾಯ್‌ಫ್ರೆಂಡ್‌ಗೆ ಕುಡಿಯುವ ಅಭ್ಯಾಸ ಬಂದುಬಿಟ್ಟಿದೆ. ಎಷ್ಟು ಬೈದ್ರೂ ಕುಡಿಯೋದು ಬಿಡೋಕೆ ರೆಡಿ ಇಲ್ಲ. ಇದು ಹೀಗೆ ಮುಂದುವರಿದರೆ ನಾನು ಬ್ರೇಕಪ್ ಮಾಡಿಕೊಳ್ಳುತ್ತೇನೆ. ನೀನಾದ್ರೂ ಬುದ್ಧಿ ಹೇಳು ಅಂತ ಕೇಳ್ಕೊಂಡ್ಳು.
ಎಲ್ಲರಿಗೂ ಎಲ್ಲಾ ವಿಷಯಕ್ಕೂ ಬುದ್ಧಿ ಹೇಳೋ ಸ್ನೇಹಿತ ಇವಳ ಮಾತಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಈಗ ಬೇಡ ಇನ್ನೂ ಸ್ವಲ್ಪ ದಿನ ಬಿಟ್ಟು ಈ ಬಗ್ಗೆ ಅವನ ಹತ್ತಿರ ಮಾತಾಡ್ತೀನಿ ಅಂತ ಹೇಳಿದೆ. ಇವಳಿಗೆ ಕೋಪ ಬಂದು ಸುಮ್ಮನಾದಳು. ಇದಾದ ಎರಡು ತಿಂಗಳ ನಂತರ ಈ ಸ್ನೇಹಿತ ಆಕೆ ಬಾಯ್‌ಫ್ರೆಂಡ್‌ನ ಕೂರಿಸಿಕೊಂಡು ಮಾತಾಡಿದ. ಅದೇನು ಮಾತಾಡಿದ್ದೋ ತಿಳಿಯದು, ಆತ ಮರುದಿನದಿಂದ ಕುಡಿಯೋದು ಕಮ್ಮಿ ಮಾಡಿದ, ಕ್ರಮೇಣ ನಿಲ್ಲಿಸೇ ಬಿಟ್ಟ.
ಆಗ ಆಕೆ ಸ್ನೇಹಿತನ ಬಳಿ ಬಂದು, ಈ ಕೆಲಸ ಆವತ್ತೇ ಮಾಡಬಹುದಿತ್ತಲ್ವಾ? ಸುಮ್ಮನೆ ಎರಡು ತಿಂಗಳಿನಿಂದ ನಾವಿಬ್ಬರೂ ಮಾತಾಡಿಲ್ಲ ಎಂದು ಬೇಜಾರು ಮಾಡಿಕೊಂಡ್ಳು. ಅದಕ್ಕೆ ಸ್ನೇಹಿತ ಹೇಳಿದ, ನಾನು ಕೂಡ ಕುಡಿತದ ಹಿಡಿತಕ್ಕೆ ಸಿಕ್ಕಿಹಾಕಿಕೊಂಡಿದ್ದೆ. ನಾನು ಕುಡಿಯೋದು ಬಿಡದೆ, ನಿನ್ನ ಬಾಯ್‌ಫ್ರೆಂಡ್‌ಗೆ ಕುಡೀಬೇಡ ಅಂತ ಹೇಳಿದ್ರೆ ತಪ್ಪಾಗತ್ತೆ ಅಲ್ವಾ? ಎಂದು ಪ್ರಶ್ನಿಸಿದ.
ಹೌದಲ್ವಾ? ಫ್ರೀಯಾಗಿ ಎಲ್ಲರಿಗೂ ಪರಿಹಾರ ಹೇಳೋದು ಎಷ್ಟು ಸುಲಭ, ಆದರೆ ಅದನ್ನು ನಾವು ಮಾಡಬೇಕು ಎಂದರೆ ಕಷ್ಟ. ಮೊದಲು ನಾವು ಸರಿ ಇದ್ದರೆ ಮಾತ್ರ ಇನ್ನೊಬ್ಬರಿಗೆ ಬೋಧನೆ ಮಾಡಬೇಕು ಅನ್ನೋದು ನಿಜ!