ಬಾಗಲಕೋಟೆಯ ಜಾನಪದ ಗಾಯಕನಿಗೆ ಪ್ರಧಾನಿ ಮೋದಿ ಬಹುಪರಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 110ನೇ ಮನ್​ ಕಿ ಬಾತ್​ ಸರಣಿಯಲ್ಲಿ ಬಾಗಲಕೋಟೆ ಮೂಲದ ಗೊಂದಲಿ ಪದ ಹಾಡುಗಾರನ ಗುಣಗಾನ ಮಾಡುವ ಮೂಲಕ ಎಲೆಮರೆಕಾಯಿಯಂತಿದ್ದ ಕಲಾವಿದನನ್ನು ಮುಖ್ಯವಾಹಿನಿಗೆ ತಂದಿದ್ದಾರೆ.

ಶಾಲೆಯ ಮೆಟ್ಟಿಲನ್ನೇ ಹತ್ತದೇ, ತಮ್ಮ ಬಾಲ್ಯದಿಂದಲೇ ಗೊಂದಲಿ ಜನಪದ ಹಾಡುಗಳ ಕಲೆಯನ್ನು ಉಸಿರಾಗಿಸಿಕೊಂಡು ನಾಡಿನಾದ್ಯಂತ ಹೆಸರು ವಾಸಿಯಾಗಿರುವ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugatekar) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ.

ಬಾಗಲಕೋಟೆ (Bagalkote) ನಗರದ ನಿವಾಸಿಯಾಗಿರುವ ವೆಂಕಪ್ಪ ಅಂಬಾಜಿ ಸುಗತೇಕರ್ (81) ತಮ್ಮ 15ನೇ ವಯಸ್ಸಿನಿಂದಲೇ ವಂಶಪಾರಂಪರ್ಯವಾಗಿ ಬಂದ ಗೊಂದಲಿ ಜನಪದ ಹಾಡುಗಳನ್ನು ಕಲಿತಿದ್ದರು. ತಾವು ಕಲಿತಿದ್ದ ಸಾವಿರಾರು ಜನಪದ ಗೀತೆಗಳು, 150ಕ್ಕೂ ಹೆಚ್ಚು ವೈಚಾರಿಕ ಕಥೆಗಳು ಹಾಗೂ ತತ್ವಗಳನ್ನು ನಾಡಿಗೆ ತಲುಪಿಸಿದ್ದಾರೆ. ಇವರ ಸಾಧನೆಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ. ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ, ಅನೇಕ ಪ್ರಶಸ್ತಿಗಳು ಲಭಿಸಿವೆ.

ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕಲಾವಿದರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ ಹಾಡುಗಳನ್ನ ಹಾಡಿ ಜನಪ್ರಿಯರಾಗಿದ್ದಾರೆ. ಸಾವಿರಾರು ಬಾಲ ಕಲಾವಿದರಿಗೆ ಒಂದು ನಯಾಪೈಸೆ ಪಡೆಯದೇ ಜನಪದ ಹಾಡುಗಳನ್ನು ಕಲಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈ ಮೂಲಕ ಜನಪದ ಕಲಾವಿದ ವೆಂಕಪ್ಪ ಅವರ ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.

ವೆಂಕಪ್ಪ ಅವರು, ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಲ್ಲೂ ಅನೇಕ ಜನಪದ ಕಾರ್ಯಕ್ರಮಗಳನ್ನು ನೀಡಿ, ಹೆಸರು ವಾಸಿಯಾಗಿದ್ದಾರೆ. ಪ್ರಧಾನಿ ಮೋದಿ ಗುಣಗಾನ ಮಾಡಿದ ಬೆನ್ನಲ್ಲೆ ವೆಂಕಪ್ಪ ಅವರ ಮನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ವೆಂಕಪ್ಪ ನಿವಾಸಕ್ಕೆ ಭೇಟಿ, ಅಭಿನಂದನೆ ಸಲ್ಲಿಸಿದ್ದಾರೆ. ವೆಂಕಪ್ಪ ಅವರಿಗೆ ಎಲ್ಲಡೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಕುಟುಂಬದಲ್ಲಿಯೂ ಸಂಭ್ರಮ ಮನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!