ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರಿಗೆ ಸಿಹಿ ತಿನಿಸುವ ಮೂಲಕ ಹಬ್ಬವನ್ನು ಆಚರಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ…ʻಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಸಮಯವನ್ನು ಕಳೆಯುವುದು ಭಾವನೆ ಮತ್ತು ಹೆಮ್ಮೆಯಿಂದ ತುಂಬಿದ ಅನುಭವವಾಗಿದೆ. ಅವರ ಕುಟುಂಬಗಳಿಂದ ದೂರವಿದ್ದು, ದೇಶಕ್ಕಾಗಿ ಅವರ ಜೀವ ಸಮರ್ಪಣಾ ಭಾವದಿಂದ ನಮ್ಮ ಜೀವನವನ್ನು ಬೆಳಗಿಸುತ್ತಾರೆʼ ಎಂದು ಪೋಸ್ಟ್ ಮಾಡಿದ್ದಾರೆ.
ನಮ್ಮ ಭದ್ರತಾ ಪಡೆಗಳ ಧೈರ್ಯವು ಅಚಲವಾಗಿದೆ. ಕಠಿಣವಾದ ಭೂಪ್ರದೇಶಗಳಲ್ಲಿ ಜೀವನ ಸಾಗಿಸುತ್ತಾ ಅವರ ಪ್ರೀತಿಪಾತ್ರರಿಂದ ದೂರವಿದ್ದಾರೆ. ಅವರ ತ್ಯಾಗ ಮತ್ತು ಸಮರ್ಪಣೆ ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಶೌರ್ಯದ ಸಾಕಾರವಾಗಿರುವ ಈ ವೀರರಿಗೆ ಭಾರತ ಯಾವಾಗಲೂ ಕೃತಜ್ಞರಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ನಲ್ಲಿ ಬರೆದಿದ್ದಾರೆ.
ದೀಪಾವಳಿ ಆಚರಿಸಲು ಬೆಳಗ್ಗೆಯೇ ಲೆಪ್ಚಾ ತಲುಪಿದ ಪ್ರಧಾನಿ ಮೋದಿ ಕೆಲಕಾಲ ಸೈನಿಕರೊಂದಿಗೆ ಸಂವಾದ ನಡೆಸಿದರು. ಮಿಲಿಟರಿ ಧಿರಿಸಿನಲ್ಲಿಯೇ ಮಿಂಚಿದ ಪ್ರಧಾನಿ ಮೋದಿ ಭಾರತೀಯ ಸೈನಿಕರ ಸಾಹಸ, ಶೌರ್ಯವನ್ನು ಕೊಂಡಾಡಿದರು.