ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರವಾಸದಲ್ಲಿರುವ ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ತಾಂಜೇನಿಯಾ ಅಧ್ಯಕ್ಷರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಭೆಯಲ್ಲಿ, ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ಒಪ್ಪದಂದ ಬಗ್ಗೆ ಚರ್ಚೆ ನಡೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿರುವ ಹಸನ್ ಅವರನ್ನು ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಬರಮಾಡಿಕೊಂಡರು. ರಾಷ್ಟ್ರಪತಿ ಭವನದ ಆವರಣದಲ್ಲಿ ಇಂದು ಪೂರ್ವಭಾವಿಯಾಗಿ ಔಪಚಾರಿಕ ಸ್ವಾಗತ ಕೋರಲಾಗಿದ್ದು, ರಾಜ್‌ಘಾಟ್‌ನಲ್ಲಿ ನಡೆದ ಸಮಾರಂಭದಲ್ಲಿ ಹಸನ್ ಭಾಗಿಯಾದರು.
ಉಭಯ ದೇಶಗಳ ನಡುವಿನ ಅತ್ಯುತ್ತಮ ಸಂಬಂಧವನ್ನು ಶ್ಲಾಘಿಸಿದ ಅಧ್ಯಕ್ಷರು, ಅವರ ಭೇಟಿಯು ಭಾರತ ಮತ್ತು ತಾಂಜಾನಿಯಾದ ರಾಜಕೀಯ, ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದರು. “ನಮ್ಮ ಎರಡು ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಸಂಬಂಧಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಭೇಟಿಯಿಂದ ನನ್ನ ನಿರೀಕ್ಷೆಯು ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸಹಕಾರಕ್ಕೆ ಹೊಸ ಮಾರ್ಗಗಳನ್ನು ತೆರೆಯಲಿದೆ, ಅದು ಕಾರ್ಯತಂತ್ರದ ಪಾಲುದಾರಿಕೆಗೆ ಕಾರಣವಾಗುತ್ತದೆ” ಎಂದರು.
ನಮ್ಮ ಪೂರ್ವಜರು ಸ್ಥಾಪಿಸಿದ ದ್ವಿಪಕ್ಷೀಯ ಬಾಂಧವ್ಯವು ದಶಕಗಳ ಕಾಲ ಹೀಗೆಯೇ ಮುಂದುವರಿಯುತ್ತದೆ ಎಂದು ನಮ್ಮ ದೇಶವು ಆಶಿಸುವುದಾಗಿ ತಿಳಿಸಿದರು.
ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಂತರ ಹಸನ್ ಅವರು ರಾಷ್ಟ್ರಪತಿಯವರನ್ನು ಭೇಟಿಯಾಗಲಿದ್ದು, ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸುವರು. ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆಯಲಿರುವ ವ್ಯಾಪಾರ ಮತ್ತು ಹೂಡಿಕೆ ವೇದಿಕೆಯಲ್ಲಿ ಪಾಲ್ಗೊಳ್ಳುವರು. ಬಳಿಕ ಅಕ್ಟೋಬರ್ 11 ರಂದು ಭಾರತದಿಂದ ನಿರ್ಗಮಿಸಲಿದ್ದಾರೆ.