ಹರಿಯಾಣದಲ್ಲಿ ದೇಶದ ಅತಿ ದೊಡ್ಡ ಖಾಸಗಿ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ: ಆರೋಗ್ಯ ಮತ್ತು ಆಧ್ಯಾತ್ಮಿಕತೆ ಕುರಿತು ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ಆರೋಗ್ಯ ಮತ್ತು ಆಧ್ಯಾತ್ಮಿಕತೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ದೇಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ಹರಿಯಾಣದಲ್ಲಿ 2,600 ಹಾಸಿಗೆಗಳ ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು “ಕೊರೋನಾ ಕಾಲಾವಧಿಯು ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಖಾಸಗಿ ಪಾಲುದಾರಿಕೆಯ ಮಹತ್ವವನ್ನು ತಿಳಿಸಿಕೊಟ್ಟಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ವಿಶ್ವದಲ್ಲೇ ಅತಿ ದೊಡ್ಡ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಈ ಪಾಲುದಾರಿಕೆಯು ಸಹಾಯ ಮಾಡಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ತಂತ್ರಜ್ಞಾನ ಮತ್ತು ಆಧುನೀಕರಣದ ಸಂಯೋಜನೆಯು ಆರೋಗ್ಯ ಕ್ಷೇತ್ರದಲ್ಲಿ ದೇಶದ ಪ್ರಗತಿಗೆ ಕಾರಣವಾಗುತ್ತದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪರಿವರ್ತನೆ ತರಲು ಭಾರತ ಪ್ರಯತ್ನಿಸುತ್ತಿದೆ” ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇಂದು ಪ್ರಧಾನಿಗಳ ಹಸ್ತದಿಂದ ಉದ್ಘಾಟಿತವಾಗಿರುವ ಈ ಆಸ್ಪತ್ರೆಯು ಸಂಪೂರ್ಣ ಕೇಂದ್ರೀಕೃತ ಸ್ವಯಂಚಾಲಿತ ಪ್ರಯೋಗಾಲಯ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡಲಿದೆ. ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು 130 ಎಕರೆ ವಿಶಾಲವಾದ ಕ್ಯಾಂಪಸ್‌ನಲ್ಲಿ ಈ ಆಸ್ಪತ್ರೆಯನ್ನು ಕಟ್ಟಲಾಗಿದ್ದು ಏಳು ಅಂತಸ್ತಿನ ಸಂಶೋಧನಾ ಬ್ಲಾಕ್ ಅನ್ನು ಹೊಂದಿದೆ ಮತ್ತು ಮಾತಾ ಅಮೃತಾನಂದಮಯಿ ಮಠದ ಆಶ್ರಯದಲ್ಲಿ ಆರು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದರ ನಿರ್ವಹಣೆಯೂ ಅಮೃತಾನಂದಮಯಿ ಮಠದಿಂದಲೇ ನಡೆಯಲಿದೆ.

ಈ ಆಸ್ಪತ್ರೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಒಮ್ಮೆ ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ 81 ವಿಶೇಷತೆಗಳನ್ನು ಹೊಂದಿರುವ ಆಸ್ಪತ್ರೆಯು ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!