ಪ್ರಧಾನಿ ಮೋದಿ ತುಂಬಾ ಉದಾರಿ, ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ: ಗುಲಾಂ ನಬಿ ಆಜಾದ್ ಬಹುಪರಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್ : 

ಪ್ರಧಾನಿ ನರೇಂದ್ರ ಮೋದಿ ಅವರು ಬರೀ ನಾಯಕರಲ್ಲ ಅವರೊಬ್ಬ ಮುತ್ಸದ್ಧಿ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಹಾಡಿಹೊಗಳಿದ್ದಾರೆ.

ಜಮ್ಮು ಕಾಶ್ಮೀರದ ಬಲಾಢ್ಯ ನಾಯಕ ಗುಲಾಂ ನಬಿ ಆಜಾದ್‌ ಕಳೆದ ವರ್ಷ, ಕಾಂಗ್ರೆಸ್ ಪಕ್ಷದ ಜೊತೆಗಿನ ಭಿನ್ನಾಭಿಪ್ರಾಯದಿಂದ ತಮ್ಮ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಬುಧವಾರ ತಮ್ಮ ಆತ್ಮಚರಿತ್ರೆ ‘ಆಜಾದ್‌’ ಬಿಡುಗಡೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮೋದಿ ಸರ್ಕಾರ 370ನೇ ವಿಧಿ, ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಹಿಜಾಬ್ ವಿವಾದದಂತಹ ವಿಷಯಗಳಲ್ಲಿ ಮೋದಿ ಅವರನ್ನು ಟೀಕಿಸಿದ ನಮ್ಮನ್ನು ಎಂದಿಗೂ ದ್ವೇಷಿಸಿಲ್ಲ, ಅವರು ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ ಎಂದು ಹೇಳಿದ್ದಾರೆ.

ನಾನು ಮೋದಿಯವರಿಗೆ ಈ ಸಮಯದಲ್ಲಿ ಮನ್ನಣೆ ನೀಡಬೇಕು. ನಾನು ಅವರಿಗೆ ಅನೇಕ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದೆ, ಆದರೆ ಅವರು ತುಂಬಾ ಉದಾರಿಯಾಗಿದ್ದರು. 370ನೇ ವಿಧಿ ಅಥವಾ ಸಿಎಎ ಅಥವಾ ಹಿಜಾಬ್ ವಿಚಾರವಾಗಿರಲಿ. ವಿರೋಧ ಪಕ್ಷದ ನಾಯಕನಾಗಿ ನಾನು ಅವರನ್ನು ಯಾವುದೇ ವಿಷಯದಲ್ಲೂ ಬಿಡಲಿಲ್ಲ. ನನಗೆ ಕೆಲವು ಮಸೂದೆಗಳು ಒಪ್ಪಿಗೆಯಾಗಿಲ್ಲ. ಆದರೆ ಈ ವಿಚಾರದಲ್ಲಿ ಅವರು ಒಬ್ಬ ರಾಜನೀತಿಜ್ಞರಂತೆ ವರ್ತಿಸಿದ್ದಾರೆ. ಈ ಕಾರಣಕ್ಕೆ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಹೇಳಿದರು.
ನಾನು ಅನೇಕ ನಾಯಕರ ಬಗ್ಗೆ ಬಹಳಷ್ಟು ವಿಷಯಗಳನ್ನು ಇಷ್ಟಪಡುತ್ತೇನೆ. ನಾನು ಕೂಡ ಹಳ್ಳಿಯಿಂದ ಬಂದವನು ಮತ್ತು ಹೆಮ್ಮೆಪಡುತ್ತೇನೆ. ನಮ್ಮ ಪ್ರಧಾನಿ (ನರೇಂದ್ರ ಮೋದಿ) ಕೂಡ ಹಳ್ಳಿಯಿಂದ ಬಂದವರು ಮತ್ತು ಚಹಾ ಮಾರುತ್ತಿದ್ದವರು. ನಾವಿಬ್ಬರು ರಾಜಕೀಯ ಪ್ರತಿಸ್ಪರ್ಧಿಗಳು, ಆದರೆ ಅವರು ತಮ್ಮ ನೈಜತೆಯನ್ನು ಮರೆಮಾಡುವುದಿಲ್ಲ ಎಂದು ಹೇಳಿದರು.

ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಹೋಗುತ್ತದೆ, ಆದರೆ ಕೆಲವರಿಗೆ ಮಾತ್ರ ಅದನ್ನು ಹೇಗೆ ಜೀರ್ಣಿಸಿಕೊಳ್ಳುವುದು ಎಂದು ತಿಳಿದಿದೆ. ಆದ್ದರಿಂದ ಅವರು ಸ್ನೇಹಿತರಾಗಿ ವರ್ಷಗಳಿಂದ ಮಾಡಿದ ಕೆಲಸಕ್ಕಾಗಿ ನಾನು ಅವರನ್ನು ಗೌರವಿಸುತ್ತೇನೆ ಎಂದು ಹೇಳಿದರು.

ಪ್ರಧಾನಿ ಮೋದಿ ಒಬ್ಬ ಒರಟು ಮನುಷ್ಯ ಎಂಬ ಭಾವನೆ ನನ್ನಲ್ಲಿತ್ತು. ಅವರಿಗೆ ಮಕ್ಕಳಿಲ್ಲ, ಆದರೆ ಅವರು ಮಾನವೀಯತೆಯಿಂದ ಬದುಕಿದ್ದಾರೆ. ಒಂದು ಕಾಲದಲ್ಲಿ ನಾನು ಸಂಕಷ್ಟದಲ್ಲಿದ್ದಾಗ ಮೋದಿ ಮುಂದೆ ನಾನು ಕಣ್ಣೀರು ಹಾಕಿದ್ದು ನಿಜ. ಅವತ್ತು ನನಗೆ ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅಂದು ಅವರು ಕೇಳಿಸಿಕೊಂಡಿದ್ದಾರೆ ಎಂದು ನಾನು ಭಾವಿಸಿದ್ದೇನೆ. ನನ್ನ ಜನರು ಅಂದು ಸಂಕಷ್ಟದಲ್ಲಿದ್ದಾಗ ಒಂದು ರಾಜ್ಯದ ಮುಖ್ಯಮಂತ್ರಿ ಯಾವೆಲ್ಲ ಸಹಾಯ ಮಾಡಬೇಕಾ ಆ ಎಲ್ಲ ಸಹಾಯವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್‌ ಅವರ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಭಾವುಕವಾಗಿ ಮಾತನಾಡಿದ್ದರು. 2006ರಲ್ಲಿ ಶ್ರೀನಗರದಲ್ಲಿ ಸಂಭವಿಸಿದ ಗ್ರೆನೆಡ್‌ ದಾಳಿಯಲ್ಲಿ ಸಾವು ಕಂಡ ಗುಜರಾತ್‌ನ ಪ್ರವಾಸಿಗರ ಶವಗಳನ್ನು ಜಮ್ಮು ಕಾಶ್ಮೀರದಿಂದ ತರುವ ನಿಟ್ಟಿನಲ್ಲಿ ಗುಲಾಂ ನಬಿ ಆಜಾದ್‌ ಮಾಡಿದ್ದ ಸಹಾಯವನ್ನು ಮೋದಿ ನೆನಪಿಸಿಕೊಂಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!