ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ, ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಪ್ರಧಾನಿಗೆ ನೋಂದಣಿ ನವೀಕರಣ ಪತ್ರ ನೀಡಿದರು.
ಎರಡು ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮೊದಲ ಹಂತ ಸೆಪ್ಟೆಂಬರ್ 2 ರಿಂದ 25 ಮತ್ತು ಎರಡನೇ ಹಂತ ಅಕ್ಟೋಬರ್ 1 ರಿಂದ 15 ರವರೆಗೆ ನಡೆಯಲಿದೆ. 10 ಕೋಟಿಗೂ ಅಧಿಕ ಜನರ ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷ ಮಾತ್ರವಲ್ಲದೇ ಒಂದು ವಿಶಿಷ್ಟ ಪಕ್ಷವಾಗಿದೆ. ಪ್ರಜಾಸತ್ತಾತ್ಮಕತೆ ಕಾಪಾಡಿಕೊಂಡಿದೆ. ಬಿಜೆಪಿಯಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಯಾವುದೇ ಪಕ್ಷವು ಸದಸ್ಯತ್ವ ಅಭಿಯಾನ ನಡೆಸುವುದಿಲ್ಲ ಎಂದರು.
ವಿಶ್ವದಲ್ಲಿಯೇ ಬಿಜೆಪಿ ಅತ್ಯಂತ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬರೀ ಸರ್ಕಾರ ರಚನೆಗಾಗಿ ಮಾತ್ರ ರಾಜಕೀಯ ಮಾಡುವುದಲ್ಲ. ಸಶಕ್ತ ಸಮಾಜವನ್ನು ರೂಪಿಸಲು ರಾಜಕೀಯ ಪಕ್ಷಗಳು ಹೋರಾಟ ನಡೆಸಬೇಕು ಎಂದರು.
ಸದಸ್ಯತ್ವ ಅಭಿಯಾನದ ಭಾಗವಾಗಿ ನೋಂದಾಯಿತ ಎಲ್ಲರೂ ತಮ್ಮ ಸದಸ್ಯತ್ವವನ್ನು ನವೀಕರಿಸಬೇಕು. ಸದಸ್ಯತ್ವ ಅಭಿಯಾನವು ಪಕ್ಷದ ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಮುಕ್ತಾಯವಾಗಲಿದೆ. ಈ ಬಾರಿಯ ಅಭಿಯಾನವು 10 ಕೋಟಿ ದಾಟಲಿದೆ ಎಂದು ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಅವರು ವಿಶ್ವಾಸ ವ್ಯಕ್ತಪಡಿಸಿದರು.