ಮಹಾಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಪ್ರಧಾನಿ ಮೋದಿ ಗೌರವ ನಮನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾರ್ಸಿಲ್ಲೆಯ ಮಜಾರ್ಗ್ಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಮನ ಸಲ್ಲಿಸಿದರು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು.

ಮಜಾರ್ಗಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಮೊದಲ ಮಹಾಯುದ್ಧದಲ್ಲಿ ಮಡಿದ ವೀರ ಸೈನಿಕರ ಗೌರವಾರ್ಥ ನಿರ್ಮಿಸಿರುವ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.

Imageಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಫ್ರಾನ್ಸ್‌ನ ಮಾರ್ಸೆಲ್ಲೆ ನಗರದ ಜನರ ಅಭೂತಪೂರ್ವ ಬೆಂಬಲವನ್ನು ಸ್ಮರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರು ಫ್ರಾನ್ಸ್‌ನಲ್ಲಿ ಭೂಗತರಾಗಿದ್ದಾಗ, ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸದಿರುವ ನಿರ್ಣಯವನ್ನು ಮಾರ್ಸೆಲ್ಲೆ ನಗರದ ಜನ ಕೈಗೊಂಡಿದ್ದರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಲ್ಲಿಸಿದ ಈ ಅವಿಸ್ಮರಣೀಯ ಪಾತ್ರಕ್ಕಾಗಿ ಭಾರತವು ಮಾರ್ಸೆಲ್ಲೆ ನಗರದ ನಿವಾಸಿಗಳು ಮತ್ತು ಫ್ರೆಂಚ್‌ ಹೋರಾಟಗಾರರಿಗೆ ಸದಾ ಚಿರಋಣಿಯಾಗಿರುತ್ತದೆ ಎಂದು ಪ್ರಧಾನನಿ ಮೋದಿ ನುಡಿದರು.

ಭಾರತ ಮತ್ತು ಫ್ರಾನ್ಸ್‌ ಅನ್ಯೋನ್ಯ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ. ಇತಿಹಾಸದುದ್ದಕ್ಕೂ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದ ನೀತಿಯನ್ನು ಅನುಸರಿಸುತ್ತಾ ಬಂದಿವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಫ್ರೆಂಚ್‌ ರಾಜಕೀಯ ಹೋರಾಟಗಾರರ ಸಹಕಾರವನ್ನು ನಾವು ಸದಾ ಸ್ಮರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್‌ ಭಾರತೀಯ ಸೇನೆಯ ವೀರ ಸೈನಿಕರು, ಫ್ರಾನ್ಸ್‌ನ ರಣಾಂಗಣದಲ್ಲಿ ಹೋರಾಡಿದ್ದರು. ಫ್ರಾನ್ಸ್‌ ಮಣ್ಣಿನಲ್ಲಿ ಭಾರತೀಯ ಸೈನಿಕರ ರಕ್ತ ಬೆರತಿದೆ. ಫ್ರಾನ್ಸ್‌ ಕೂಡ ಹುತಾತ್ಮ ಭಾರತೀಯ ಸೈನಿಕರ ಗೌರವಾರ್ಥ ಯುದ್ಧ ಸ್ಮಾರಕವನ್ನು ನಿರ್ಮಿಸಿದೆ. ಇದು ಉಭಯ ದೇಶಗಳು ವೀರ ಸೈನಿಕರಿಗೆ ಸಲ್ಲಿಸುವ ಗೌರವದ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!