ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನ್ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ 3 ಯೋಜನೆ, ಜಿ20 ಶೃಂಗಸಭೆ ಆಯೋಜನೆ ಯಶಸ್ಸನ್ನು ಮೆಲುಕು ಹಾಕಿದರು.
ಈ ವೇಳೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೊಯ್ಸಳರಿಂದ ನಿರ್ಮಿತವಾದ ದೇವಸ್ಥಾನಗಳು ಸೇರಿರುವ ವಿಚಾರವನ್ನು ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದರು. ಹಾಗೆಯೇ ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನ್ ಅನ್ನೂ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿರುವುದನ್ನು ಪಿಎಂ ಪ್ರಸ್ತಾಪಿಸಿದ್ದಾರೆ.
ಚಂದ್ರಯಾನ 3 ಯೋಜನೆ ಯಶಸ್ಸಿನ ಬಳಿಕ ಜಿ20 ಶೃಂಗಸಭೆ ಆಯೋಜನೆ ಪ್ರತಿಯೊಬ್ಬ ಭಾರತೀಯನ ಖುಷಿಯನ್ನು ದುಪ್ಪಟ್ಟು ಮಾಡಿದೆ. ಈ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ-20ಯ ಪೂರ್ಣ ಸದಸ್ಯರನ್ನಾಗಿ ಮಾಡುವ ಮೂಲಕ ಭಾರತವು ತನ್ನ ನಾಯಕತ್ವವನ್ನು ಸಾಬೀತುಪಡಿಸಿದೆ ಎಂದರು.
ಅದಲ್ಲದೆ ಚಂದ್ರಯಾನ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇಳಿಯುತ್ತಿರುವ ನೇರ ಪ್ರಸಾರವನ್ನು 80 ಲಕ್ಷ ಮಂದಿ ನೋಡಿರುವ ವಿಚಾರವನ್ನು ಪಿಎಂ ಮೋದಿ ತಿಳಿಸಿದ್ದಾರೆ.
ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯಲ್ಲಿ ಯುವಸಮುದಾಯದವರು ಸೇರಿ ಮಕ್ಕಳಿಗಾಗಿ ‘ಘೋಡಾ ಲೈಬ್ರರಿ’ ಸ್ಥಾಪಿಸಿರುವ ವಿಚಾರವನ್ನು ಪಿಎಂ ಪ್ರಸ್ತಾಪಿಸಿದ್ದಾರೆ.
ಭಾರತ, ಮಧ್ಯಪ್ರಾಚ್ಯ ಮತ್ತು ಯೋರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆ ಮುಂಬರುವ ದಿನಗಳಲ್ಲಿ ಜಾಗತಿಕ ವ್ಯಾಪಾರದ ರಹದಾರಿಯಾಗಲಿದೆ ಎಂಬ ಸಂಗತಿಗಳನ್ನು ಪಿಎಂ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.