ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನ್ನೊಂದು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲಕ್ಕೆ ಚಾಲನೆ ನೀಡಿದ್ದಾರೆ.
ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ 11 ರಾಜ್ಯಗಳಲ್ಲಿ ಈ ರೈಲುಗಳು ಸಂಚರಿಸಲಿವೆ.
ಈ ವೇಳೆ ಮಾತನಾಡಿದ ಅವರು, ʼಈ ರೈಲುಗಳು 11 ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಅಲ್ಲದೆ ಈ ರೈಲುಗಳು ದೇಶದ ಹೊಸ ಶಕ್ತಿಯನ್ನು ಪ್ರತಿಬಿಂಬಿಸುತ್ತಿವೆ’ ಎಂದರು.
‘ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇರುವ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು ಕೂಡ ನಡೆಯುತ್ತಿವೆ. ಆಜಾದಿ ಕಾ ಅಮೃತ್ ಕಾಲದಲ್ಲಿ ಅಭಿವೃದ್ಧಿಪಡಿಸುವ ಈ ಎಲ್ಲಾ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳು ಎಂದು ಕರೆಯಲಾಗುವುದು’ ಎಂದು ಹೇಳಿದರು.
‘ಈಗಾಗಲೇ ದೇಶದಾದ್ಯಂತ 25 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಈ ಪಟ್ಟಿಗೆ ಈಗ 9 ರೈಲುಗಳು ಸೇರ್ಪಡೆಗೊಂಡಿವೆ. ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದ್ದು, ಇಲ್ಲಿಯವರೆಗೆ 1.11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ’ ಎಂದು ತಿಳಿಸಿದರು.