ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದ ಮಾಧವ್ ರಾಷ್ಟ್ರೀಯ ಉದ್ಯಾನವನವನ್ನುಒಂಬತ್ತನೇ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ.
ಮಧ್ಯಪ್ರದೇಶವು ಈಗಾಗಲೇ “ಹುಲಿ ರಾಜ್ಯ” ಪಟ್ಟ ಪಡೆದುಕೊಂಡಿದೆ. ರಾಜ್ಯವು ವನ್ಯಜೀವಿ ಪ್ರಿಯರಿಗೆ ಮೆಚ್ಚಿನ ತಾಣವಾಗಿದೆ. ಚಂಬಲ್ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಹೇಳಿದರು.
ಇನ್ನು ಈ ಕುರಿತು ಖುಷಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ,ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ವನ್ಯಜೀವಿ ಪ್ರಿಯರಿಗೆ ಇದೊಂದು ಅದ್ಭುತ ಸುದ್ದಿ! ಭಾರತವು ವನ್ಯಜೀವಿ ವೈವಿಧ್ಯತೆ ಮತ್ತು ವನ್ಯಜೀವಿಗಳನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ. ಪ್ರಾಣಿಗಳನ್ನು ರಕ್ಷಿಸುವಲ್ಲಿ ಮತ್ತು ಸುಸ್ಥಿರ ಗ್ರಹಕ್ಕೆ ಕೊಡುಗೆ ನೀಡುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಪ್ರಧಾನಿಯ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್, “ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಭಾರತದ 58ನೇ ಮತ್ತು ಮಧ್ಯ ಪ್ರದೇಶದ 9ನೇ ಹುಲಿ ಮೀಸಲು ಪ್ರದೇಶವೆಂದು ಹೆಸರಿಸುವಲ್ಲಿ ದೂರದೃಷ್ಟಿಯ ನಾಯಕತ್ವಕ್ಕಾಗಿ ಗೌರವಾನ್ವಿತ ಪ್ರಧಾನಿಗೆ ಹೃತ್ಪೂರ್ವಕ ಧನ್ಯವಾದಗಳು! ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ನಮ್ಮ ಜೀವವೈವಿಧ್ಯತೆಯನ್ನು ರಕ್ಷಿಸಲು ಮಧ್ಯಪ್ರದೇಶ ಹೆಮ್ಮೆಪಡುತ್ತದೆ.” ಎಂದು ಹೇಳಿದ್ದಾರೆ.
ಶಿವಪುರಿ ಜಿಲ್ಲೆಯ ಮಾಧವ್ ರಾಷ್ಟ್ರೀಯ ಉದ್ಯಾನವನಕ್ಕೆ ಶೀಘ್ರದಲ್ಲೇ ಹುಲಿ ಮೀಸಲು ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಾದವ್ ಕೆಲ ದಿನಗಳ ಹಿಂದೆ ಘೋಷಿಸಿದ್ದರು. ಉದ್ಯಾನವನಕ್ಕೆ ಒಂದು ಜೋಡಿ ಹುಲಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆಯೂ ಅವರು ತಿಳಿಸಿದ್ದರು.
ಶಿವಪುರಿ ಜಿಲ್ಲೆಯಲ್ಲಿರುವ ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಆರಂಭದಲ್ಲಿ 1956 ರಲ್ಲಿ ಶಿವಪುರಿ ರಾಷ್ಟ್ರೀಯ ಉದ್ಯಾನವನವೆಂದು ಹೆಸರಿಸಲಾಗಿತ್ತು. ಇದು 167 ಚದರ ಕಿಲೋಮೀಟರ್ ವ್ಯಾಪಿಸಿದೆ. 1958 ರಲ್ಲಿ, ಇದನ್ನು ಸಿಂಧಿಯಾ ರಾಜವಂಶದ ಮಹಾರಾಜ ಮಾಧವ ರಾವ್ ಸಿಂಧಿಯಾ ಅವರ ಹೆಸರಿನಿಂದ ಮರುನಾಮಕರಣ ಮಾಡಲಾಯಿತು. ಈ ಉದ್ಯಾನವನವು ಸಾಖ್ಯ ಸಾಗರ್ ಎಂಬ ಮಾನವ ನಿರ್ಮಿತ ಜಲಾಶಯವನ್ನು ಒಳಗೊಂಡಿದೆ. ಇದನ್ನು ರಾಮಸರ್ ತಾಣವೆಂದು ಕರೆಯಲಾಗುತ್ತದೆ.