July 28, 2026
Tuesday, July 28, 2026
spot_img

ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಮಮತಾ ಬ್ಯಾನರ್ಜಿಗೆ: ಪ್ರಧಾನಿ ಮೋದಿ ಲೇವಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಈಗ ‘ಝಲ್ಮುರಿ’ ಸದ್ದು ಮಾಡುತ್ತಿದೆ. ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ನಡೆದ ಬೃಹತ್ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟೀಕೆಗಳಿಗೆ ತಮಾಷೆಯ ಧಾಟಿಯಲ್ಲೇ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಬಂಗಾಳದ ಬೀದಿಯಲ್ಲಿ ಝಲ್ಮುರಿ ಸವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ಟೀಕಿಸಿದ್ದ ಮಮತಾ ಬ್ಯಾನರ್ಜಿ, “ಇದು ಮೊದಲೇ ಸಿದ್ಧಪಡಿಸಿದ ಸ್ಕ್ರಿಪ್ಟೆಡ್ ನಾಟಕ” ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ನಾನು ಬಂಗಾಳದಲ್ಲಿ ಝಲ್ಮುರಿ ಸವಿದ ವಿಷಯ ಇಲ್ಲಿನ ಕೆಲವು ಜನರನ್ನು ನಡುಗಿಸಿದೆ ಎಂದು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನು, ಆದರೆ ಅದರ ಖಾರ ಅನುಭವಿಸಿದ್ದು ಮಾತ್ರ ತೃಣಮೂಲ ಕಾಂಗ್ರೆಸ್ ನಾಯಕರು!” ಎಂದು ಲೇವಡಿ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, “ಮೇ 4ರಂದು ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ರಾಜ್ಯಾದ್ಯಂತ ವಿಜಯೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಜನರಿಗೆ ಸಿಹಿತಿಂಡಿಗಳ ಜೊತೆಗೆ ಝಲ್ಮುರಿಯನ್ನೂ ಹಂಚಲಾಗುವುದು” ಎಂದು ಘೋಷಿಸಿದರು.

ಬಂಗಾಳದಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನದ ಬಗ್ಗೆ ಮಾತನಾಡಿದ ಮೋದಿ, “ಈ ಬಾರಿ ಹಿಂಸಾಚಾರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿಯೊಬ್ಬ ಮತದಾರನೂ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಮುಕ್ತ ಮತ್ತು ಶಾಂತಿಯುತ ಚುನಾವಣೆಗೆ ಶ್ರಮಿಸುತ್ತಿರುವ ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಿ ನೌಕರರ ಜವಾಬ್ದಾರಿಯುತ ಕೆಲಸವನ್ನು ನಾನು ಅಭಿನಂದಿಸುತ್ತೇನೆ,” ಎಂದರು.

ಮತದಾರರ ಉತ್ಸಾಹವನ್ನು ಕಂಡು ಈ ಬಾರಿ ರಾಜ್ಯದಲ್ಲಿ ಮತದಾನದ ಎಲ್ಲಾ ಹಳೆಯ ದಾಖಲೆಗಳು ಮುರಿಯಲಿವೆ ಎಂದು ಅವರು ಭವಿಷ್ಯ ನುಡಿದರು. ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿರುವ ಕೃಷ್ಣನಗರದಲ್ಲಿ ಮೋದಿಯವರ ಈ ಭಾಷಣ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !