ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಅತ್ಯಂತ ಪ್ರಚೋದನಕಾರಿಯಾಗಿದೆ ಅಲ್ಲದೆ ಸಂವಿಧಾನ ವಿರೋಧಿಯಾದುದು ಎಂದು ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿಷಯ-ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿಯವರು ಮಾಡಿದರೂ ಅಪರಾಧವೇ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಪ್ರಧಾನ ಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ’’ ಎಂಬ ಪ್ರಧಾನಿ @narendramodi ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು.
ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ.ವಿಷಯ – ವಿದ್ಯಮಾನಗಳೇನೇ ಇರಲಿ, ಯಾರಾದರೂ…
— Siddaramaiah (@siddaramaiah) September 7, 2023