ಪ್ರಧಾನಿ ಮೋದಿಯವರ ರೋಡ್ ಶೋ ಅಭೂತಪೂರ್ವ, ಐತಿಹಾಸಿಕ: ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಇಂದು ನಡೆಸಿದ ‘ನಮ್ಮ ಬೆಂಗಳೂರು-ನಮ್ಮ ಹೆಮ್ಮೆ’ ರೋಡ್ ಶೋ ಅಭೂತಪೂರ್ವ ಮತ್ತು ಐತಿಹಾಸಿಕ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರದಲ್ಲಿ ಸಾಗಿದ ಪ್ರಧಾನಮಂತ್ರಿಯವರ ರೋಡ್ ಶೋ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. 12 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿ ಆಶೀರ್ವದಿಸಿದ್ದಾರೆ. ಪುಷ್ಪ ಮಳೆಯೊಂದಿಗೆ ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದ್ದಾರೆ .

ಇಂತಹ ಕಾರ್ಯಕ್ರಮ ಹಿಂದೆಂದೂ ಕಂಡಿರಲಿಲ್ಲ. ನರೇಂದ್ರ ಮೋದಿಯವರನ್ನು ನೋಡಲು ಜನರು ಉತ್ಸಾಹದಿಂದ ಭಾವನಾತ್ಮಕ ಸಂಬಂಧದೊಂದಿಗೆ ಬಂದಿದ್ದರು. ಅಬಾಲವೃದ್ಧರಾಗಿ ಎಲ್ಲರೂ ಮೋದಿಯವರನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ಮೋದಿಯವರು ನಿಜವಾದ ಜನನಾಯಕ ಎಂಬುದು ರೋಡ್ ಶೋ ತೋರಿಸಿದೆ ಎಂದು ತಿಳಿಸಿದರು.

ನಗರದಲ್ಲಿ ಹಬ್ಬದ ವಾತಾವರಣ
ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬಗಳನ್ನು ಒಂದೇ ದಿನ ಆಚರಿಸಿದಂತೆ ನಗರದಲ್ಲಿ ಹಬ್ಬದ ವಾತಾವರಣವಿತ್ತು. ಯಾವುದೇ ರಾಜಕೀಯ ಪಕ್ಷಕ್ಕೆ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಅದು, ಬಿಜೆಪಿ ಮತ್ತು ಮೋದಿಯವರಿಂದ ಸಾಧ್ಯ ಎಂದು ತೇಜಸ್ವಿ ಸೂರ್ಯ ಅವರು ಹೇಳಿದರು.

ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಮಹಾ ನಗರದ ಜನತೆಗೆ ಎಲ್ಲರ ಪರವಾಗಿ ಅಭಿನಂದನೆಗಳು. ಯಾವುದೇ ಸಣ್ಣ ಅಹಿತಕರ ಘಟನೆಯೂ ಆಗದೆ, ಕಾರ್ಯಕ್ರಮ ನಡೆದಿದೆ ಎಂದು ರೋಡ್ ಷೋ ನಂತರ ಸ್ವತಃ ಎಸ್‍ಪಿಜಿಯವರು ಹೇಳಿದ್ದಾರೆ. ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ನಾಗರಿಕರಿಗೆ ಸಲ್ಲಬೇಕು. ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ವಾಹನ ಸಂಚಾರ ಸಮಸ್ಯೆ ಇರಲಿಲ್ಲ. ಅಚ್ಚುಕಟ್ಟಾದ ವ್ಯವಸ್ಥೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕಾಗಿ ಪೊಲೀಸ್ ಕಾನ್ಸ್‍ಟೇಬಲ್‍ಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಾಳೆ ಹೊಸ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ ಆರು ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿಯವರು ನಡೆಸುವ ರೋಡ್ ಶೋಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ವಿಧಾನಪರಿಷತ್ ಸದಸ್ಯೆ ಹಾಗೂ ರಾಜ್ಯ ವಕ್ತಾರರಾದ ಡಾ.ತೇಜಸ್ವಿನಿ ಗೌಡ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!