ಕೊರೊನಾ ನಾಲ್ಕನೇ ಅಲೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ನೀಡಿದ ಸಲಹೆ ಏನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಜ್ಯಗಳಲ್ಲಿ ಕೋವಿಡ್‌ ಪ್ರಸ್ತುತ ಪರಿಸ್ಥಿತಿ ಹೇಗಿದೆ..? ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ವರದಿ ಪಡೆದಿದ್ದಾರೆ.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಇತರೆ ದೇಶಗಳಿಗೆ ಹೋಲಿಸಿದರೆ COVID-19 ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ, ನಾವು ಪ್ರಕರಣಗಳ ಏರಿಕೆಯನ್ನು ನೋಡುತ್ತಿದ್ದೇವೆ. ಈ ಬಗ್ಗೆ ಎಚ್ಚರದಿಂದ ಇರಬೇಕು. ಕೋವಿಡ್ ಸವಾಲನ್ನು ಎದುರಿಸಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಶೇಕಡಾ 96ರಷ್ಟು ಜನ ಕೊರೊನಾ ಮೊದಲ ಡೋಸ್‌ ಲಸಿಕೆಯನ್ನು ಪಡೆದಿದ್ದಾರೆ. ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ಜನಸಂಖ್ಯೆಯ 85% ಜನ COVID-19 ಲಸಿಕೆಯ ಎರಡನೇ ಡೋಸ್‌ ಪಡೆದಿದ್ದಾರೆ ಎಂಬ ಅಂಶ ಪ್ರತಿಯೊಬ್ಬ ನಾಗರೀಕನೂ ಹೆಮ್ಮೆ ಪಡುವ ವಿಷಯವಾಗಿದೆ.

ಕೊರೊನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಬೇಕು. ರಷ್ಯಾ-ಉಕ್ರೇನ್‌ ಯುದ್ಧ, ಪೂರೈಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದರ ಜೊತೆಗೆ ಅನೇಕ ಸವಾಲುಗಳನ್ನು ತಂದೊಡ್ಡಿದೆ. ಹಾಗಾಗಿ ಸಹಕಾರಿ ಮನೋಭಾವ ಮುಖ್ಯ ಎಂಬ ಮಾತನ್ನು ಮೋದಿ ತಿಳಿಸಿದ್ದಾರೆ. ಮಾನವಶಕ್ತಿ ಮತ್ತು ವೈದ್ಯಕೀಯ ಮೂಲಸೌಕರ್ಯದ ಬಗ್ಗೆ ಕೂಡಾ ಇಂದಿನ ಕೋವಿಡ್ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಅರ್ಹ ನಡವಳಿಕೆ ಪಾಲಿಸಲು ಸೂಚನೆ ನೀಡಿದ್ದಾರೆ. ಮಾಸ್ಕ್‌ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಿದ್ದಾರೆ. ಎರಡು ವರ್ಷಗಳ ಬಳಿಕ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳ ಆರೋಗ್ಯ ನಮ್ಮ ಕರ್ತವ್ಯ. ಪೋಷಕರು ಸರ್ಕಾರ್‌ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲಲ್ಲಿ ಅರ್ಹ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿ ಎಂದು ಸಲಹೆ ನೀಡಿದ್ದಾರೆ.

ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ 6-12 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ನೀಡಿದ ಬಳಿಕ ಪ್ರಧಾನಿ ಮೋದಿಯವರು ಈ ಮಾತನ್ನು ಹೇಳಿದ್ದಾರೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!