ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಜಗಾರ್ ಮೇಳದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ 70,000 ನೇಮಕಾತಿ ಪತ್ರಗಳನ್ನು ಇಂದು ವಿತರಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ರೈಲ್ವೆ, ಅಂಚೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭರ್ತಿಯಾದ ನೌಕರರಿಗೆ ನೇಮಕಾತಿ ಪತ್ರಗಳನ್ನು ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಜಾದಿ ಕಾ ಅಮೃತ್ ಕಾಲ ಪ್ರಾರಂಭವಾಗಿರುವ ಹಿನ್ನಲೆ ಈ ಅವಧಿಯಲ್ಲಿ ಸರ್ಕಾರಿ ಸೇವೆಗಳಿಗೆ ಸೇರ್ಪಡೆಯಾಗುವವರು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಹೊಂದಿರಬೇಕು. ರೋಜಗಾರ್ ಮೇಳವು ಎನ್‌ಡಿಎ – ಬಿಜೆಪಿ ಸರ್ಕಾರದ ಹೊಸ ಗುರುತು ಎಂದರು.
ಈ ವೇಳೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜಕೀಯ ಭ್ರಷ್ಟಾಚಾರ, ಯೋಜನೆಗಳಲ್ಲಿನ ಅವ್ಯವಹಾರಗಳು, ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಹಳೆಯ ಸರ್ಕಾರಗಳ ಗುರುತು ಎಂದು ವಾಗ್ದಾಳಿ ಮಾಡಿದರು.
ಹಿಂದೆ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ರಾಜವಂಶದ ಪಕ್ಷ ಉತ್ತೇಜಿಸಿತ್ತು. ಕೆಲವು ಪಕ್ಷಗಳು ವಿವಿಧ ಹುದ್ದೆಗಳಿಗೆ ತಮ್ಮದೇ ಆದ ದರ ಕಾರ್ಡ್ ನಿಗದಿಪಡಿಸಿತ್ತು. ಈ ಮೂಲಕ ಯುವಕರನ್ನು ಲೂಟಿ ಮಾಡಿದ್ದವು. ಯುವಕರ ಉಜ್ವಲ ಭವಿಷ್ಯವನ್ನು ಕಾಪಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಉದ್ಯೋಗಾವಕಾಶಗಳ ಕುರಿತು ಮಾತನಾಡಿ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಲಭ್ಯವಿದೆ. ‘ಸ್ಟಾರ್ಟ್ಅಪ್ ಇಂಡಿಯಾ’ ಮತ್ತು ‘ಸ್ಟ್ಯಾಂಡ್-ಅಪ್ ಇಂಡಿಯಾ’ ಯೋಜನೆಗಳು ಭಾರತದ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಿವೆ. ಒಂದು ದಶಕದ ಹಿಂದಿನದಕ್ಕೆ ಹೋಲಿಸಿದರೆ ಈಗ ಭಾರತ ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ಬಲಿಷ್ಠ ದೇಶವಾಗಿದೆ. ನಿರ್ಣಾಯಕತೆಯು ಭಾರತ ಸರ್ಕಾರದ ಗುರುತಾಗಿದೆ ಎಂದು ಪ್ರತಿಪಾದಿಸಿದರು.