ಈ ಬಾರಿಯ ನಿರ್ಧಾರ, ಬಿಜೆಪಿ ಬಹುಮತದ ಸರ್ಕಾರ: ಮೋದಿ ಕಹಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಬರಲಿದೆ ಎಂದು ಮಹಿಳೆಯರು ಸೇರಿದಂತೆ ಎಲ್ಲರೂ ನಿರ್ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೀದರ್​ ಸಮಾವೇಶದ ಬಳಿಕ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಜಿಲ್ಲೆಯ 8 ಮತಕ್ಷೇತ್ರ ಸೇರಿದಂತೆ ಬಾಗಲಕೋಟೆಯ ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಶನಿವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಪಂಚನದಿಗಳ ನಾಡು ವಿಜಯಪುರದ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಇಷ್ಟೊತ್ತು ನಾನು ಬಸವೇಶ್ವರರ ಕರ್ಮ ಭೂಮಿಯಲ್ಲಿ ಇದ್ದೆ. ಈಗ ನಾನು ಬಸವೇಶ್ವರರ ಜನ್ಮಭೂಮಿಯಲ್ಲಿ ಇದ್ದೇನೆ. ಸದ್ಯ ನಾನು ಸಿದ್ದೇಶ್ವರ ಶ್ರೀ ನಡೆದಾಡಿದ ಭೂಮಿಯಲ್ಲಿದ್ದೇನೆ. ಇಲ್ಲಿನ ಪರಂಪರೆಗೆ ಅವರು ಹಾಕಿಕೊಟ್ಟ ಮಾರ್ಗ ಸ್ಮರಣೀಯ ಎಂದರು.

ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಹಲವು ಯೋಜನೆ ರೂಪಿಸಿದೆ. ಕನಸುಗಳನ್ನು ನನಸು ಮಾಡುವ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ. ಹೀಗಾಗಿ ಈ ಬಾರಿ ಅನೇಕ ಹೊಸ ಮುಖಗಳಿಗೆ ಚುನಾವಣಾ ಕಣದಲ್ಲಿ ಇಳಿಸಿದ್ದು, ಮುಂದಿನ 20 ವರ್ಷದ ಯೋಜನೆ ರೂಪಿಸಿ ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.

ಆದರೆ ಇಂದು ಕಾಂಗ್ರೆಸ್ ನವರು ಮಾತ್ರ ಇದು ನಮ್ಮ ಕೊನೆಯ ಚುನಾವಣೆ ಮತ ಕೊಡಿ ಎಂದು ಕೇಳುತ್ತಿರುವುದು ದುರ್ದೈವದ ಸಂಗತಿ ಎಂದು ತಿಳಿಸಿದರು.

ಅಲ್ಲದೆ ಇಂದು ದೇಶದ ಮೂಲೆ ಮೂಲೆಯಲ್ಲಿ ಒಂದೇ ಶಬ್ದ ಕೇಳಿ ಬರುತ್ತಿದೆ. ಅದೇನೆಂದರೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದೇ ಎಲ್ಲೆಡೆ ಕೇಳಿ ಬರುತ್ತಿದೆ ಎಂದು ಸಂತಸದಿಂದ ಹಂಚಿಕೊಂಡರು.

ಭ್ರಷ್ಟರ ಖಾತೆ ಸೇರುತ್ತಿತ್ತು

ಕೇಂದ್ರದಿಂದ 1 ರೂಪಾಯಿ ಬಿಡುಗಡೆ ಮಾಡಿದ್ದರೆ ಫಲಾನುಭವಿಗೆ 15 ಪೈಸೆ ಮಾತ್ರ ಸಿಗುತ್ತಿತ್ತು ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯವರೇ ಹೇಳಿದ್ದರು. ಪಂಚಾಯತಿಯಿಂದ ಹಿಡಿದು ಸಂಸತ್ತಿನವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದಾಗ ಪರಿಸ್ಥಿತಿ ಹಾಗಿತ್ತು. ಭ್ರಷ್ಟಾಚಾರ ತೊಡೆದುಹಾಕಲು ಏನೂ ಕ್ರಮ ಕೈಗೊಂಡಿರಲಿಲ್ಲ. ಬಡ ಜನರಿಗೆ ಸಲ್ಲಬೇಕಾದ ದುಡ್ಡನ್ನು ಲೂಟಿ ಮಾಡಲಾಗುತ್ತಿತ್ತು. ನೇರ ನಗದು ವರ್ಗಾವಣೆ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಈಗ ಎಲ್ಲ ಲಾಭಾಂಶವೂ ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು.

ಫಲಾನುಭವಿಗಳಿಗೆ ನೇರ ಹಣ ಜಮೆ

ಇಂದು ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ಹಣ ನೇರ ಜಮೆ ಮಾಡಿದೆ. ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ, ಮಾಡುತ್ತಿದೆ. ಡಬಲ್​ ಇಂಜಿನ್​ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕದಲ್ಲೂ ಬಡವರಿಗೆ ರೇಷನ್​ ನೀಡುತ್ತಿದ್ದೇವೆ ಎಂದು ಹೇಳಿದರು.

ಪಾರದರ್ಶಕತೆ ಹೊಂದಿರುವ ಯೋಜನೆಗಳು

ಬಿಜೆಪಿ ಸರ್ಕಾರವು ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ. ಎಲ್ಲಾ ಹಣವೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇಡೀ ದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಹಣ ನೇರವಾಗಿ ರೈತರ ಖಾತೆಗಳಿಗೆ ತಲುಪುತ್ತಿದೆ. ವಿಜಯಪುರದ ರೈತರ ಖಾತೆಗಳಿಗೂ ನೇರ ಹಣ ಜಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಹಣ ಇಲ್ಲಿವರೆಗೆ ಬರುತ್ತಲೇ ಇರಲಿಲ್ಲ, ಕಾಂಗ್ರೆಸ್ ಯಾವುದೇ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ​ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡರು. ಆದರೆ, ಬಿಜೆಪಿಯು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ರೈತರಿಗೆ ನೆರವಾಗುವ ಅನೇಕ ಕ್ರಮಗಳು ಅನುಷ್ಠಾನ

ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್​​ನಲ್ಲಿ ಅನುದಾನ ನೀಡಿದ್ದೇವೆ. ವಿಜಯಪುರದ ರೈತರಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕೆಲಸ ಆರಂಭವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕಟಿಬದ್ಧತೆಯಾಗಿದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೂ ಮೊದಲು ಕುಡಿಯುವ ನೀರನ್ನು ಎಲ್ಲಿಂದಲೋ ತರಬೇಕಿತ್ತು. ಈಗ ಮನೆ ಮನೆಗೆ ನೀರು ಬರುತ್ತಿದೆ ಎಂದು ತಿಳಿಸಿದರು.

ಮಹಿಳೆಯರ ಜೀವನ ಬದಲಿಸಿದ ಬಿಜೆಪಿ

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತು. ಬಿಜೆಪಿ ಸರ್ಕಾರದ ನೀತಿಯಿಂದ ಇಂದು ನಮ್ಮ ಮಾತೆಯರಿಗೆ, ಸಹೋದರಿಯರಿಗೆ ಹೊಸ ಶಕ್ತಿ ದೊರೆತಿದೆ. ಬಿಜೆಪಿ ಸರ್ಕಾರ ಜನಧನ ಬ್ಯಾಂಕ್ ಖಾತೆ ಮೂಲಕ ಮಹಿಳೆಯರ ಜೀವನ ಬದಲಿಸಿದೆ. ಈ ಖಾತೆಯ ಮೂಲಕ ಸರ್ಕಾರಿ ಯೋಜನೆಗಳ ಹಣ ನೇರ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಕಲ್ಯಾಣಕ್ಕೆ ಗಂಭೀರ ಯತ್ನವನ್ನೇ ಮಾಡಿಲ್ಲ. ಬಿಜೆಪಿ ಸರ್ಕಾರ ಲಕ್ಷಾಂತರ ರೂಪಾಯಿ ನೀಡಿದೆ. ನಮ್ಮ ಸರ್ಕಾರ ಆಧುನಿಕ ಸಂಪರ್ಕ, ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚು ಸೃಷ್ಟಿಯಾಗಲಿವೆ ಎಂದರು.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವೋಕಲ್ ಫಾರ್ ಲೋಕಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರವೂ ಅದಕ್ಕೆ ಬೆಂಬಲ ನೀಡಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ​ ನಿರ್ಮಾಣ ಸಹ ಮಾಡಿದ್ದೇವೆ. ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುತ್ತಿವೆ. ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಸಮಾವೇಶದಲ್ಲಿ ಜಿಲ್ಲೆಯ 8 ಮತಕ್ಷೇತ್ರ ಸೇರಿದಂತೆ ಜಮಖಂಡಿಯ ಬಿಜೆಪಿ ಅಭ್ಯರ್ಥಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!